PTCL Act | DC ಮಟ್ಟದಲ್ಲೇ SC, ST ಜಾಗ ಭೂ ಪರಿವರ್ತನೆ/ಮಾರಾಟ: ಪೂರ್ವಾನುಮತಿ ಬಗ್ಗೆ ಸರ್ಕಾರದ ಮಹತ್ವದ ಸುತ್ತೋಲೆ
ಪಿಟಿಸಿಎಲ್ ಕಾಯ್ದೆ | DC ಮಟ್ಟದಲ್ಲೇ SC, ST ಜಮೀನಿನ ಭೂ ಪರಿವರ್ತನೆ ಯಾ ಮಾರಾಟ
ಪೂರ್ವಾನುಮತಿ ಕುರಿತು ಸರ್ಕಾರದ ಸುತ್ತೋಲೆ ಏನು ಹೇಳುತ್ತದೆ?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಭೂಮಿಯನ್ನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಹೊರಡಿಸಿದ ಸುತ್ತೋಲೆ ಸ್ಪಷ್ಟವಾಗಿ ಹೇಳಿದೆ.
ಜಮೀನು ಮಾರಾಟಕ್ಕೆ ಮುನ್ನ ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದರಲ್ಲಿ ಯಾವುದೇ ಲೋಪವಾದರೂ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕಂದಾಯ ಇಲಾಖೆ(ಭೂ ಮಂಜೂರಾತಿ-೧)ಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ. ಬಲರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಸುತ್ತೋಲೆಯನ್ನು ದಿನಾಂಕ 05-11-2022ರಂದು ಹೊರಡಿಸಲಾಗಿದೆ. (ಸಂಖ್ಯೆ: ಆರ್‌ಡಿ 06 ಎಲ್‌ಜಿಪಿ 2022)
ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್/ 4 ಗುಂಟೆ ಜಮೀನಿನಲ್ಲಿ ಸ್ವಂತ ವಾಸದ (Residential Purpose) ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಕೋರಿ ಮಂಜೂರುದಾರರು ಯಾ ವಾರಿಸುದಾರರು ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ನಿಯಮಾನುಸಾರ ಭೂ ಪರಿವರ್ತನೆ ಆದೇಶ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆ ಹೇಳಿದೆ.
ಸ್ವಂತ ವಾಸದ ಭೂ ಪರಿವರ್ತನೆ ಮಾಡಿದ ಆದೇಶದಲ್ಲಿ ಭೂ ಪರಿವರ್ತನೆಯಾದ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವ ಹಾಗಿಲ್ಲ ಎಂಬ ಷರತ್ತನ್ನು ವಿಧಿಸಲು ಈ ಸುತ್ತೋಲೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಸರ್ಕಾರದಿಂದ ಅನುಮತಿ ಪಡೆಯದೇ ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವ ಸಾಧ್ಯತೆ ಹೆಚ್ಚು ಇದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಭೂ ರಹಿತರಾಗುವ ಸಾಧ್ಯತೆಗಳು ಹೆಚ್ಚಿದೆ ಎಂಬುದನ್ನು ಕರ್ನಾಟಕ ಹೈಕೋರ್ಟ್ 2021ರಲ್ಲಿ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಕರಣ: ಮುನ್ನಯ್ಯ ಮತ್ತಿತರರು Vs ರಾಜ್ಯ ಸರ್ಕಾರ ಮತ್ತಿತರರು
ಕರ್ನಾಟಕ ಹೈಕೋರ್ಟ್, WP 60483/2016 Dated 05-07-2021
ಸದ್ರಿ ಈ ಮೇಲಿನ ಪ್ರಕರಣದಲ್ಲಿ 1978ರ ಧ್ಯೇಯೋದ್ಧೇಶಗಳನ್ನು ಗಂಭೀರವಾಗಿ ಪಾಲಿಸುವ ದೃಷ್ಟಿಯಿಂದ ಇನ್ನು ಮುಂದೆ ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಜಮೀನುಗಳನ್ನು ಭೂ ಪರಿವರ್ತನೆ ಮಾಡುವ ಮೊದಲು ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತರವಷ್ಟೇ ಭೂ ಪರಿವರ್ತನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಈ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಕಂದಾಯ ಸಚಿವರಿಗೆ ಒಂದು ಮನವಿಯನ್ನು ಮಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್ ಜಾಗವನ್ನು ಸ್ವಂತ ವಾಸ ಹಾಗೂ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವಾಗ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಅಥವಾ ತಹಶೀಲ್ದಾರ್ ಅವರಿಗೆ ಭೂ ಪರಿವರ್ತನೆ ಮಾಡಲು ಸರ್ಕಾರದ ಪೂರ್ವಾನುಮತಿ ಇಲ್ಲದೇ ಸಕ್ಷಮ ಪ್ರಾಧಿಕಾರವೆಂದು ಆದೇಶ ಹೊರಡಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ವಿನಂತಿಸಲಾಗಿತ್ತು.
ಈ ವಿನಂತಿ ಮೇರೆಗೆ ಸುತ್ತೋಲೆಯಲ್ಲಿ ಇರುವ ಅಂಶಗಳನ್ನು ಸರಳೀಕರಿಸಿ ವಾಸ್ತವ್ಯ ಹಾಗೂ ವಾಣಿಜ್ಯ ಉದ್ದೇಶಕ್ಕೆ 10 ಸೆಂಟ್ಸ್ ಜಮೀನಿನ ಭೂ ಪರಿವರ್ತನೆ ಅಧಿಕಾರವನ್ನು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ಅವರಿಗೆ ನೀಡುವಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದು ವಿನಂತಿಸಲಾಗಿತ್ತು.
ಸುತ್ತೋಲೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸಂಖ್ಯೆ: ಆರ್‌ಡಿ 06 ಎಲ್‌ಜಿಪಿ 2022 (ದಿನಾಂಕ 05-11-2022)
ಇದನ್ನೂ ಓದಿ:
SC ST ಜಮೀನು ಮಾರಾಟ: ಕಾನೂನಾತ್ಮಕ ವಾರಿಸುದಾರರ ಅರ್ಜಿ ಮಾತ್ರ ಪರಿಗಣನೆ: ಕರ್ನಾಟಕ ಹೈಕೋರ್ಟ್