ಕೋವಿಡ್ ಲಸಿಕೆ ಸಾವುಗಳಿಗೆ ಸರ್ಕಾರ ಹೊಣೆಯಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಕೋವಿಡ್ ಲಸಿಕೆ ಸಾವುಗಳಿಗೆ ಸರ್ಕಾರ ಹೊಣೆಯಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಕೋವಿಡ್ ಲಸಿಕೆಯಿಂದ ಆದ ಸಾವುಗಳು ದುರದೃಷ್ಟಕರ. ಅದಕ್ಕೆ ನಾವು ಹೊಣೆಯಲ್ಲ. ಸರ್ಕಾರ ಕೇವಲ ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಕೋವಿಡ್ ಲಸಿಕೆಗೆ ಪ್ರೋತ್ಸಾಹ ನೀಡಿದೆ ಅಷ್ಟೇ.. ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಲಸಿಕೆಯನ್ನು ಔಷಧ ಕಂಪೆನಿಗಳು ತಯಾರಿಸಿವೆ. ಲಸಿಕೆ ನೀಡಿದ ಬಳಿಕ ಆದ ಅನಾಹುತಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಸರ್ಕಾರ ನ್ಯಾಯಾಲಯದ ಮುಂದೆ ಹಾಕಿರುವ ಅಫಿದಾವಿತ್ ಮೂಲಕ ಪ್ರಮಾಣೀಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕೋವಿಡ್ ಲಸಿಕೆ ಅಡ್ಡ ಪರಿಣಾಮಕ್ಕೆ ಒಳಗಾಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದರು. ಈ ಬಗ್ಗೆ ಪೋಷಕರು ಸಲ್ಲಿಸಿದ್ದ ಮನವಿಗೆ ತಕರಾರು ಸಲ್ಲಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ 'ಈ ಸಾವುಗಳು ದುರದೃಷ್ಟಕರ. ಆದರೆ ಅದಕ್ಕೆ ಸರ್ಕಾರ ಹೊಣೆಯಲ್ಲ" ಎಂದು ಹೇಳಿದೆ.
ಕಾಲಮಿತಿಯಲ್ಲಿ ಮರಣೋತ್ತರ ಪರೀಕ್ಷೆ ಮತ್ತು ತನಿಖಾ ವರದಿ ನೀಡಬೇಕು ಹಾಗೂ ಸಾವಿನ ಬಗ್ಗೆ ಸ್ವತಂತ್ರ ಸಮಿತಿಯಿಂದ ತನಿಖೆ ನಡೆಸಬೇಕು. ಪೋಷಕರಿಗೆ ವಿತ್ತೀಯವಾಗಿ ಪರಿಹಾರ ನೀಡಬೇಕು ಲಸಿಕೆಗಳ ದುಷ್ಪರಿಣಾಮಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಮಾರ್ಗಸೂಚಿಗಳನ್ನು ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿತ್ತು.
ಕೆಲ ತಿಂಗಳ ಹಿಂದಷ್ಟೇ ಕೇರಳ ಹೈಕೋರ್ಟ್ ತನ್ನ ಆದೇಶದಲ್ಲಿ ಕೋವಿಡ್ ಲಸಿಕೆ ಸಂಬಂಧ ಕೇಂದ್ರ ಸರ್ಕಾರದ ನೀತಿ ಕಾಳಸಂತೆಗೆ ನೆರವು ನೀಡುವಂತಿದೆ ಎಂದು ತರಾಟೆಗೆ ತೆಗೆದುಕೊಂಡಿತ್ತು.
ಸಮುದಾಯಕ್ಕೆ ಕೊರೋನಾ ಲಸಿಕೆ ನೀಡಿದ ನಂತರ ಆದ ಅಡ್ಡ ಪರಿಣಾಮಗಳಿಂದ ಸಾವನ್ನಪ್ಪಿದ ಪ್ರಕರಣಗಳನ್ನು ಗುರುತಿಸುವಂತೆ ಕೇರಳ ಹೈಕೋರ್ಟ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಸೂಚನೆ ನೀಡಿತ್ತು. ಸಂತ್ರಸ್ತರ ಅವಲಂಬಿತರಿಗೆ ಪರಿಹಾರ ನೀಡಲು ಮಾರ್ಗಸೂಚಿ ರೂಪಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿತ್ತು.