ಸರ್ವೇ ಕಾರ್ಯಕ್ಕೆ ಇನ್ನು ಮೋಜಣಿ ವ್ಯವಸ್ಥೆ ಕಡ್ಡಾಯ: ಹೈಕೋರ್ಟ್‌ಗೆ ವರದಿ ನೀಡಿದ ಸರ್ಕಾರ
ಸರ್ವೇ ಕಾರ್ಯಕ್ಕೆ ಇನ್ನು ಮೋಜಣಿ ವ್ಯವಸ್ಥೆ ಕಡ್ಡಾಯ: ಹೈಕೋರ್ಟ್‌ಗೆ ವರದಿ ನೀಡಿದ ಸರ್ಕಾರ
ರಾಜ್ಯದಲ್ಲಿ ಸರ್ವೆ ಸಂಬಂಧಿತ ಕೆಲಸಗಳನ್ನು ಮೋಜಣಿ ವ್ಯವಸ್ಥೆಯಲ್ಲೇ ನಡೆಸಬೇಕು. ಒಂದು ವೇಳೆ, ಯಾವುದೇ ಅರ್ಜಿಯನ್ನು ಈ ವ್ಯವಸ್ಥೆಯಲ್ಲಿ ದಾಖಲಿಸದೇ ಸರ್ವೇ ಮಾಡುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಈ ಬಗ್ಗೆ ಶಿಸ್ತುಪಾಲನಾ ಸಮಿತಿ ರಚಿಸಲಾಗಿದೆ.
ಇದು ಕರ್ನಾಟಕ ಸರ್ಕಾರ ಅಫಿಡವಿಟ್ ಮೂಲಕ ರಾಜ್ಯ ಹೈಕೋರ್ಟ್‌ಗೆ ನೀಡಿದ ವಿವರಣೆ.
ಜಿಲ್ಲಾಧಿಕಾರಿ, ತಹಶೀಲ್ದಾರ್ ಯಾ ಉಪವಿಭಾಗಾಧಿಕಾರಿ ಕಚೇರಿಗಳ ಮೂಲಕ ಸರ್ವೇ ಕಾರ್ಯ ಕೋರಿ ಸಲ್ಲಿಸಲಾಗುವ ಪ್ರತಿಯೊಂದು ಅರ್ಜಿಯನ್ನು ಮೋಜಣಿ ವ್ಯವಸ್ಥೆಯಲ್ಲಿ ದಾಖಲಿಸಬೇಕು. ಇದರಿಂದ ಪ್ರತಿ ಅರ್ಜಿ ಮೇಲೆ ನಿಗಾ ಇಡಲು ಅನುಕೂಲ ಎಂದು ಸರ್ವೇ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆ ಕುರಿತ ಮಾಹಿತಿಯನ್ನು ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೈಕೋರ್ಟ್‌ಗೆ ತಮ್ಮ ಅನುಪಾಲನಾ ವರದಿಯಲ್ಲಿ ತಿಳಿಸಿದ್ದಾರೆ.
2022, ಜುಲೈ 6ರಂದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸದೃಢತೆ ಜಾರಿಗೆ ತರಲು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಮಾಹಿತಿ ತಂತ್ರಜ್ಞಾನ ಪ್ರೇರಿತ ಪೋಡಿ ಅರ್ಜಿಗಳನ್ನು ವ್ಯವಸ್ಥಿತವಾಗಿ ಸ್ವೀಕರಿಸಿ ವಿಲೇವಾರಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು.
ಅಷ್ಟೇ ಅಲ್ಲದೆ, ಈ ಆದೇಶದ ಅನುಪಾಲನೆಯ ಕುರಿತು ಮಾಹಿತಿ ನೀಡುವಂತೆ ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ನ್ಯಾಯಪೀಠ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಫಿಡವಿಟ್ ಮೂಲಕ ವರದಿ ನೀಡಲಾಗಿದೆ.
'ಸರ್ವೇ ಪೋಡಿ'ಗೆ ಸಂಬಂಧಿಸಿದ ಸಲ್ಲಿಸಿದ ಹಾಗೂ ಸಲ್ಲಿಸುವ ಎಲ್ಲಾ ಅರ್ಜಿಗಳನ್ನೂ ಮೋಜಣಿ ವ್ಯವಸ್ಥೆಗೆ ಅಳವಡಿಸಬೇಕು.
ರಾಜ್ಯದಲ್ಲಿ ಸರ್ವೆ ಇಲಾಖೆಯು ಪುನರ್ ಸರ್ವೆ ಆರಂಭಿಸಿದ್ದು, ಸ್ವಾಮಿತ್ವ ಮತ್ತು UPOR ಪ್ರಾಜೆಕ್ಟ್ ಆರಂಭಿಸಿದೆ. ದಾಖಲೆಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಜಮೀನಿನ ಮಾಲಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಆಸ್ತಿಯ ಹಕ್ಕನ್ನು ಈ ಪ್ರಕ್ರಿಯೆಯ ಮೂಲಕ ಅಂತಿಮಗೊಳಿಸಲಾಗುತ್ತದೆ. ಜೊತೆಗೆ ಸರ್ವೆ ಇಲಾಖೆಯು ಸಾರ್ವಜನಿಕರಿಗೆ ಇನ್ನಷ್ಟು ಆನ್‌ಲೈನ್ ಸೇವೆಗಳನ್ನು ಕಲ್ಪಿಸಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
'ಪೋಡಿ' ಕುರಿತ ಸುತ್ತೋಲೆ ಬಗ್ಗೆ ರಾಜ್ಯದ ಎಲ್ಲ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.