ನಾಮನಿರ್ದೇಶಿತ ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ: ಹೈಕೋರ್ಟ್
ನಾಮನಿರ್ದೇಶಿತ ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ: ಹೈಕೋರ್ಟ್
ಸ್ಥಳೀಯಾಡಳಿತದ ಸದಸ್ಯರಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ತೀರ್ಪಿನಿಂದ ಇತ್ತೀಚೆಗೆ ಪರಿಷತ್ತಿಗೆ ಆಯ್ಕೆಯಾಗಿರುವ ಎಂ.ಕೆ. ಪ್ರಾಣೇಶ್ ಅವರ ಸದಸ್ಯತ್ವಕ್ಕೆ ಸಂಚಕಾರ ಬಂದಿದೆ. ಆದರೆ, ಮಧ್ಯಂತರ ಅರ್ಜಿಯೊಂದು ಇತ್ಯರ್ಥಕ್ಕೆ ಬಾಕಿ ಇರುವ ಕಾರಣ ತಕ್ಷಣಕ್ಕೆ ಸದಸ್ಯತ್ವ ರದ್ದಾಗುವ ಸಂಕಟದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ವಿರುದ್ಧ ಪ್ರಾಣೇಶ್ ಕೇವಲ ಆರು ಮತಗಳಿಂದ ಜಯ ಗಳಿಸಿದ್ದರು.
ಸೋಲು ಕಂಡಿದ್ದ ಅಭ್ಯರ್ಥಿ ಗಾಯತ್ರಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಹೇಮಂತ್ ಶಾಂತನಗೌಡರ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ನಾಮನಿರ್ದೇಶಿತ ಸದಸ್ಯರಿಗೆ ಪಾಲಿಕೆ ಯಾ ಸ್ಥಳೀಯಾಡಳಿತದ ಸಭೆಯಲ್ಲೂ ಮತದಾನ ಮಾಡುವ ಹಕ್ಕಿಲ್ಲ. ಆದರೆ, ಅವರು ಕೇವಲ ಸಲಹೆ ಸೂಚನೆ ನೀಡಬಹುದು. ಇದನ್ನು ಸಂವಿಧಾನದ ಕಲಂ 243 (6) ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (KMC) ಕಾಯ್ದೆಯಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಚಿಕ್ಕಮಗಳೂರು ಸ್ಥಳೀಯಾಡಳಿತ MLC ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ 4 ಪಟ್ಟಣ ಪಂಚಾಯತ್‌ಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಕಾನೂನುಬಾಹಿರ. ಸಂವಿಧಾನದ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಭಾಗವಹಿಸಬಹುದೇ ಹೊರತು, ಅವರಿಗೆ ಮತದಾನದ ಹಕ್ಕಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಇದಕ್ಕೆ ಪ್ರತಿವಾದ ಮಂಡಿಸಿದ ಪ್ರತಿವಾದಿ ವಕೀಲರು, ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಅಂದ ಮಾತ್ರಕ್ಕೆ ಪರಿಷತ್ ಚುನಾವಣೆಯಲ್ಲೂ ಮತದಾನದ ಹಕ್ಕಿಲ್ಲ ಎನ್ನಲಾಗದು. ನಾಮನಿರ್ದೇಶಿತರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ ಎಂದು ಎಲ್ಲೂ ನಿರ್ಬಂಧ ಹೇರಿಲ್ಲ ಎಂದು ವಾದಿಸಿದ್ದರು.
ಚುನಾವಣಾ ತಕರಾರು ಅರ್ಜಿ ಬಾಕಿ
ಮೇಲ್ಮನೆ ಸದಸ್ಯ ಬಿಜೆಪಿಯ ಎಂ ಕೆ ಪ್ರಾಣೇಶ್ ಆಯ್ಕೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ಹೈಕೋರ್ಟ್‌ನ ಮತ್ತೊಂದು ಪೀಠದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಆ ಅರ್ಜಿ ಇತ್ಯರ್ಥವಾಗುವವರೆಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ಈಗ ನೀಡಿರುವ ತೀರ್ಪು ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.