![ಸರ್ಕಾರಿ ನೌಕರರಿಗೆ ಸಂಘಟನೆ ನಿರ್ಬಂಧ: ಜಾತಿ, ಭಾಷೆ ಸಂಘ ಸೇರಲು ಕಡಿವಾಣ! ಸರ್ಕಾರಿ ನೌಕರರಿಗೆ ಸಂಘಟನೆ ನಿರ್ಬಂಧ: ಜಾತಿ, ಭಾಷೆ ಸಂಘ ಸೇರಲು ಕಡಿವಾಣ!](https://blogger.googleusercontent.com/img/b/R29vZ2xl/AVvXsEhurJHTej9EzzKIDnkOzTo-Ppmi_C6b8PJfXBKjpklz47WHfhy7CF-BVwsSAWHUAwzf37jHOkZGLsHTC3U-6eZVIdUTFqP_JrSzMKY0xhm0jkfMR8unzTGGwz7b0Phabik1OzdUEUVWX12JbE0K4HIt0wEoHW4mvuy2cqvrs2UQfVjpa1xXdSJIcoaAGw/w640-h348/Karnataka%20Assembly.jpg)
ಸರ್ಕಾರಿ ನೌಕರರಿಗೆ ಸಂಘಟನೆ ನಿರ್ಬಂಧ: ಜಾತಿ, ಭಾಷೆ ಸಂಘ ಸೇರಲು ಕಡಿವಾಣ!
ಸರ್ಕಾರಿ ನೌಕರರಿಗೆ ಸಂಘಟನೆ ನಿರ್ಬಂಧ: ಜಾತಿ, ಭಾಷೆ ಸಂಘ ಸೇರಲು ಕಡಿವಾಣ!
ಇನ್ನು ಮುಂದೆ ಸರ್ಕಾರಿ ನೌಕರರು ಧರ್ಮ, ಜಾತಿ, ಜನಾಂಗ ಆಧಾರಿತ ಸಂಘಟನೆಗಳನ್ನು ಈ ಹಿಂದಿನಂತೆ ಸೇರುವ ಹಾಗಿಲ್ಲ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಹಾಗಿಲ್ಲ.
ಸರ್ಕಾರಿ ನೌಕರರನ್ನು ಧರ್ಮ, ಜಾತಿ, ಜನಾಂಗ, ಪ್ರದೇಶ, ಭಾಷೆ ಹಾಗೂ ಕೋಮುಭಾವನೆಗಳನ್ನು ಕೆರಳಿಸುವ ಸಂಸ್ಥೆ ಮತ್ತು ಸಂಘಟನೆಗಳ ಜೊತೆ ಕೈಜೋಡಿಸಿದಂತೆ ನಿಷೇಧ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂತಹ ಸಂಸ್ಥೆಗಳು ಮತ್ತು ಸಂಘಟನೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ನಿರ್ಬಂಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಜಾತಿ, ಧರ್ಮ, ಭಾಷೆ ಆಧಾರಿತ ಸಂಘಟನೆಗಳು ಸೀಮಿತವಾದ ಹಾಗೂ ತಮ್ಮದೇ ಆದ ಉದ್ದೇಶಗಳ ಈಡೇರಿಕೆಗಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಇದು ವಿವಿಧ ಸಮುದಾಯಗಳ ನಡುವೆ ಕೋಮು ದ್ವೇಷ ಮತ್ತು ಅಸೂಯೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ಅಂತಹ ಸಂಘಟನೆಗಳ ಜೊತೆಗೆ ಸರ್ಕಾರಿ ನೌಕರರು ಸೇರಬಾರದು ಎಂದು ನಿರ್ಬಂಧ ವಿಧಿಸಲಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು-2021ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈ ಕುರಿತ ಕರಡು ತಿದ್ದುಪಡಿ ಸಿದ್ಧವಾಗಿದ್ದು, ವಿಧಾನಮಂಡಲದ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಚಿವ ಸಂಪುಟಕ್ಕೆ ಪ್ರಸ್ತಾಪ ಮಂಡಿಸಿದೆ.
ನೂತನ ಕರಡು ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಜಾತಿ, ಸಮುದಾಯ, ಧರ್ಮ, ಭಾಷೆ, ಪ್ರದೇಶ ಇತ್ಯಾದಿಗಳನ್ನು ಆಧರಿಸಿ ನೋಂದಣಿಯಾದ ಯಾ ನೋಂದಣಿ ಆಗದ ಸಂಸ್ಥೆಗಳನ್ನು ಅಥವಾ ವೇದಿಕೆಗಳನ್ನು ರಚಿಸದಂತೆ ನಿರ್ಬಂಧ ವಿಧಿಸಲಿದೆ.
ಉಲ್ಲಂಘಿಸಿದರೆ ಶಿಕ್ಷೆ ಏನು..?
ಪ್ರಸ್ತುತ ಕರಡು ನೀತಿಯಲ್ಲಿ, ಸರ್ಕಾರಿ ನೌಕರರಿಗೆ ಸಂಘಟನೆಗೆ ಸೇರಲು ನಿರ್ಬಂಧ ವಿಧಿಸಲಾಗಿದೆ. ಆದರೆ, ಅದನ್ನು ಮೀರಿ ಸಂಘಟನೆಯಲ್ಲಿ ಪಾಲ್ಗೊಂಡರೆ ಶಿಕ್ಷೆ ಏನು ಎಂಬ ಬಗ್ಗೆ ಸ್ಪಷ್ಟವಾದ ರೂಪುರೇಶೆ ಇಲ್ಲ.
ಶಿಕ್ಷೆಯನ್ನು ಸ್ಪಷ್ಟವಾಗಿ ಹೇಳದಿದ್ದರೂ ಇಲಾಖಾ ಶಿಸ್ತುಕ್ರಮದ ಬಗ್ಗೆ ಪ್ರಸ್ತಾಪ ಇದೆ. ವೇತನ ಭಡ್ತಿಗೆ ತಡೆ, ಅಮಾನತು ಮೊದಲಾದ ಕಠಿಣ ಕ್ರಮ ಇಲ್ಲದಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ನಿರ್ಬಂಧ ಯಾ ಕಡಿವಾಣಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.
ತಿದ್ದುಪಡಿಯ ಮುಖ್ಯ ಉದ್ದೇಶಗಳೇನು..?
ಸರ್ಕಾರಿ ನೌಕರರು ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗಬಾರದು
ಸಂವಿಧಾನದ ಅಡಿಯಲ್ಲಿ ನಿರ್ಭೀತವಾಗಿ ಕರ್ತವ್ಯ ನಿರ್ವಹಿಸುವಂತಾಗಬೇಕು
ಸಮಾಜದಲ್ಲಿ ಶಾಂತಿ-ಸೌಹಾರ್ದ ಕಾಪಾಡಲು ಆದ್ಯತೆ ನೀಡಬೇಕು
ಸರ್ಕಾರಿ ನೌಕರರು ಎಲ್ಲ ವರ್ಗ, ಧರ್ಮ, ಭಾಷೆಯವರನ್ನೂ ಸಮಾನವಾಗಿ ಕಾಣಬೇಕು
ಕೋಮು ಸಂಘಟನೆಗಳ ಸದಸ್ಯರಾದರೆ ಇನ್ನೊಂದು ಕೋಮಿನ ಜನರಿಗೆ ನ್ಯಾಯ ನೀಡಲಾಗದು
ಸಂಘಟನೆಗೆ ಸೇರುವ ಕಾರಣ, ಸಾಮಾಜಿಕ ದ್ವೇಷ, ಕ್ಷೋಭೆ, ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ
ಇದನ್ನೂ ಓದಿ:
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ ಖಾಯಂಗೊಳಿಸಲು ಹೈಕೋರ್ಟ್ ಸೂಚನೆ
ಪದೋನ್ನತಿ ನಿರಾಕರಿಸಿದ ನೌಕರರು ಕಾಲಬದ್ಧ ವೇತನ ಬಡ್ತಿ ಪಡೆಯಲು ಅರ್ಹರಲ್ಲ: ಸುಪ್ರೀಂ ಕೋರ್ಟ್