ವಕೀಲರ ಅಕ್ರಮ ಬಂಧನ ಪ್ರಕರಣದ ರೂವಾರಿ ಎಸ್‌ಐ ಸುತೇಶ್ ಸಸ್ಪೆಂಡ್: ಯುವ ವಕೀಲನ ವಿರುದ್ಧ ತೆರೆಮರೆಯಲ್ಲಿ ನಡೆದಿದೆ ಸೇಡಿನ ಕ್ರಮ?
ವಕೀಲರ ಅಕ್ರಮ ಬಂಧನ ಪ್ರಕರಣದ ರೂವಾರಿ ಎಸ್‌ಐ ಸುತೇಶ್ ಸಸ್ಪೆಂಡ್: ಯುವ ವಕೀಲನ ವಿರುದ್ಧ ತೆರೆಮರೆಯಲ್ಲಿ ನಡೆದಿದೆ ಸೇಡಿನ ಕ್ರಮ?
ಬಂಟ್ವಾಳ ತಾಲೂಕಿನ ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್‌ಐ ಸುತೇಶ್ ಕೊನೆಗೂ ಸಸ್ಪೆಂಡ್ ಆಗಿದ್ದಾರೆ. ರಾತೋರಾತ್ರಿ ಅಮಾನುಷವಾಗಿ ಮತ್ತು ಅಕ್ರಮವಾಗಿ ಯವ ವಕೀಲ ಕುಲದೀಪ್ ಶೆಟ್ಟಿಯನ್ನು ಬಂಧಿಸುವ ಮೂಲಕ ಈ ಆರೋಪಿ ಪೊಲೀಸ್ ಅಧಿಕಾರಿ ರಾಜ್ಯಾದ್ಯಂತ ಕುಖ್ಯಾತಿಗೆ ಒಳಗಾಗಿದ್ದರು. ಈ ಹಿಂದೆ ಚಿಕ್ಕಮಗಳೂರಿನಲ್ಲೂ ಶಿಸ್ತು ಕ್ರಮಕ್ಕೆ ಮುಂದಾಗಿ ಪಾಠ ಕಲಿಯದ ಖಾಕಿ ಅಧಿಕಾರಿಯ ದರ್ಪಕ್ಕೆ ರಾಜ್ಯದ ವಕೀಲರ ಸಮುದಾಯ ಮರೆಯಲಾಗದ ಪಾಠ ಕಲಿಸಿದೆ.
ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಗೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದ ವಕೀಲರ ಸಂಘದ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಭರವಸೆ ಬ್ರೇಕ್ ಹಾಕಿತ್ತು. ನಾಲ್ಕು ದಿನಗಳ ಕಾಲ ಈ ಹೋರಾಟ ಮುಂದೂಡಲ್ಪಟ್ಟಿತ್ತು.
ಶನಿವಾರ ವಿಮಾನ ನಿಲ್ದಾಣದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಯುವ ವಕೀಲರಿಗೆ ಆದ ಅನ್ಯಾಯ ಮತ್ತು ಪೊಲೀಸ್ ಅಧಿಕಾರಿಯ ದರ್ಪದ ನಡವಳಿಕೆಯನ್ನು ವಿವರಿಸಿತ್ತು. ಗೃಹ ಸಚಿವರನ್ನೂ ಭೇಟಿ ಮಾಡಿ ಮನವಿಯನ್ನು ನೀಡಿತ್ತು.
ಇದರ ಬೆನ್ನಲ್ಲೇ ಪೊಲೀಸ್ ಅಧಿಕಾರಿಯ ಸಸ್ಪೆಂಡ್ ಸುದ್ದಿ ಹೊರಬಿದ್ದಿದೆ. ಪಶ್ಚಿಮ ವಲಯದ ಐಜಿಪಿ ಚಂದ್ರಗುಪ್ತ ಅವರು ಸ್ವತಃ ಈ ಸಸ್ಪೆಂಡ್ ಆದೇಶಕ್ಕೆ ಸಹಿ ಹಾಕಿದ್ಧಾರೆ. ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ಅವರು ಐಜಿಪಿ ಜೊತೆಗೆ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಅಮಾನತು ಆದೇಶವನ್ನು ಹೊರಡಿಸಿರುವುದಾಗಿ ಪಶ್ಚಿಮ ವಲಯದ ಐಜಿಪಿ ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಕ್ಕೆ ಎಣ್ಮಕಜೆ ಅವರು ತಿಳಿಸಿದ್ದಾರೆ.
ಯುವ ವಕೀಲನ ವಿರುದ್ಧ ತೆರೆಮರೆಯಲ್ಲಿ ನಡೆದಿದೆ ಸೇಡಿನ ಕ್ರಮ?
ಈ ಮಧ್ಯೆ, ಯುವ ವಕೀಲ ಕುಲದೀಪ್ ವಿರುದ್ಧ ಸೇಡಿನ ಕ್ರಮವೊಂದು ಸದ್ದಿಲ್ಲದೆ ತೆರೆಮರೆಯಲ್ಲಿ ನಡೆದಿದೆ. ಪುತ್ತೂರು ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿವೈಎಸ್‌ಪಿ) ಕುಲದೀಪ್ ಕುಟುಂಬಕ್ಕೆ ನೋಟೀಸ್ ಜಾರಿಗೊಳಿಸಿದ್ದಾರೆ.
ಕುಲದೀಪ್ ಅವರ ತಾಯಿ ಮಮತಾ ಅವರ ಮೂಲಕ ತಂದೆ ಚಂದ್ರಶೇಖರ ಶೆಟ್ಟಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಭಾನುವಾರ ಪೂಂಜಾಲಕಟ್ಟೆ ಪೊಲೀಸರ ಮೂಲಕ ನೋಟೀಸ್ ಜಾರಿಗೊಳಿಸಿದ್ದಾರೆ. ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಇದೆ. ವಿಚಾರಣೆಗೆ ಆಗಮಿಸುವ ಸಂದರ್ಭದಲ್ಲಿ ಅವರನ್ನು ಆ ವಾರಂಟ್ ಜಾರಿಗೊಳಿಸಿ ಬಂಧಿಸುವ ಮೂಲಕ ಈ ಪ್ರಕರಣವನ್ನು ಬುಡಮೇಲು ಮಾಡುವುದು ಇದರ ಸ್ಪಷ್ಟ ಉದ್ದೇಶ. ಮತ್ತು ಇದೇ ಕಾರಣದಿಂದ ಉದ್ದೇಶಪೂರ್ವಕವಾಗಿ ಅತ್ಯಲ್ಪ ಅವಧಿಯಲ್ಲಿ ವಿಚಾರಣಾ ದಿನಾಂಕವನ್ನು ಗೊತ್ತುಪಡಿಸಲಾಗಿದೆ.
ಮಂಗಳವಾರ ತಮ್ಮ ಸಮ್ಮುಖದಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಯೂ ಆಗಿರುವ ಡಿವೈಎಸ್‌ಪಿ ಸೂಚನೆ ನೀಡಿದ್ದಾರೆ. ಒಂದು ವೇಳೆ, ನೈಜ ತನಿಖೆಗೆ ಪೊಲೀಸರು ಮುಂದಾಗುವುದಿದ್ದರೆ, ಕುಲದೀಪ್ ಶೆಟ್ಟಿ ಅವರನ್ನು ಮೊದಲು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಬಹುದಿತ್ತು. ತಂದೆಗೆ ನೋಟೀಸ್ ಜಾರಿಗೊಳಿಸಿ ಮಾನಸಿಕ ಒತ್ತಡ ಹಾಗೂ ಬ್ಲ್ಯಾಕ್‌ಮೇಲ್ ತಂತ್ರವನ್ನು ಪೊಲೀಸರು ಅನುಸರಿಸಿದ್ದಾರೆ.
ಕೇವಲ ಎರಡು ದಿನಗಳ ಅವಧಿಯನ್ನು ಕಲ್ಪಿಸಿರುವುದು ಖಾಕಿ ಪಡೆಯು ಯುವ ವಕೀಲರ ಕುಟುಂಬದ ವಿರುದ್ಧ ನಡೆಸುತ್ತಿರುವ ತೆರೆಮರೆಯ ಸೇಡಿನ ಕ್ರಮ ಎಂದು ಭಾವಿಸಲಾಗಿದೆ. ಮಂಗಳೂರಿನ ಖ್ಯಾತ ಕ್ರಿಮಿನಲ್ ವಕೀಲರಾದ ವರದರಾಜ್ ಅವರು ವಕೀಲರ ಕುಟುಂಬದ ವಕಾಲತ್ತು ವಹಿಸಲಿದ್ದು, ಕುಲದೀಪ್ ಶೆಟ್ಟಿ ಅವರ ಪರವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನೂ ಹಾಕಲಾಗಿದೆ.
ಎಸ್‌ಐ ಸುತೇಶ್ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣದ ತನಿಖೆಯನ್ನು ಕ್ಷಿಪ್ರಗತಿಯಲ್ಲಿ ನಡೆಸಿ ಸುತೇಶ್‌ನನ್ನು ರಕ್ಷಿಸುವ ಹುನ್ನಾರ ಮಾಡಲಾಗುತ್ತಿದೆ. ಇದೇ ರೀತಿ, ವಕೀಲ ಕುಲದೀಪ್ ಕುಟುಂಬದ ಮೇಲೆ ಒತ್ತಡ, ಬ್ಲ್ಯಾಕ್‌ಮೇಲ್ ತಂತ್ರವನ್ನೂ ಪೊಲೀಸ್ ಇಲಾಖೆ ನಡೆಸುವ ಸಾಧ್ಯತೆ ಇದೆ ಎಂದು ವಕೀಲರ ಸಮುದಾಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಪೊಲೀಸ್ ಇಲಾಖೆ ನಡೆಸುವ ಎಲ್ಲ ರೀತಿಯ ಕುತಂತ್ರಗಳನ್ನು ಎದುರಿಸಲು ವಕೀಲ ಸಮುದಾಯ ಸಜ್ಜಾಗಿದೆ ಎಂದು ಮಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಸ್ಪಷ್ಟ ಧ್ವನಿಯಲ್ಲಿ ಹೇಳಿದ್ದಾರೆ.
Read This Also:
ಬೀಳ್ಕೊಡುಗೆ ಸಮಾಂಭದಲ್ಲಿ ಜಡ್ಜ್ ಸಾಹೇಬರ ನಾಗಿನ್ ಡ್ಯಾನ್ಸ್: ಜಡ್ಜ್, ಕೋರ್ಟ್ ಸಿಬ್ಬಂದಿ ಸಸ್ಪೆಂಡ್
ವಯೋವೃದ್ಧ ಮನೆ ಬಾಗಿಲಿಗೆ ತೆರಳಿ ಮನವಿ ಸ್ವೀಕರಿಸಿ ನ್ಯಾಯಾಧೀಶರು
ಲಾಯರ್ ಫೀಸಿಗೂ ಕೋರ್ಟ್ ಆದೇಶಕ್ಕೂ ಸಂಬಂಧವಿಲ್ಲ; ಕೇಸು ಗುಣವಾಗದಿದ್ದರೆ ಅದು ವಕೀಲರ ನಂಬಿಕೆ ದ್ರೋಹವಲ್ಲ