ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿದ ಎಸ್ಐ: ವಕೀಲನ ಬಂಧನ ವಿರುದ್ಧ ಭುಗಿಲೆದ್ಧ ಆಕ್ರೋಶ
ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿದ ಎಸ್ಐ: ವಕೀಲನ ಬಂಧನ ವಿರುದ್ಧ ಭುಗಿಲೆದ್ಧ ಆಕ್ರೋಶ
ವಕೀಲರೊಬ್ಬರನ್ನು ರಾತೋರಾತ್ರಿ ಬಂಧಿಸಿದ ರೀತಿಗೆ ರಾಜ್ಯಾದ್ಯಂತ ವಕೀಲರ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಾಯಿ, ಸಂಬಂಧಿಕರ ಸಮ್ಮುಖದಲ್ಲೇ ಅಮಾನುಷವಾಗಿ ವಕೀಲನ ಬಂಧನವನ್ನು ಮಾಡಿ ಪುಂಡಾಟಿಕೆ ಮೆರೆದ ಖಾಕಿ ಪಡೆಯ ಅಧಿಕಾರಿ ಸುತೇಶ್ ಎಂಬವರನ್ನು ತಕ್ಷಣ ಅಮಾನತು ಮಾಡಬೇಕು ಎಂಬ ಆಗ್ರಹ ರಾಜ್ಯದೆಲ್ಲೆಡೆಯಿಂದ ಕೇಳಿಬಂದಿದೆ.
ಬಂಧನದ ಮರುದಿನವೇ ಬಂಟ್ವಾಳದಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಈ ಒತ್ತಾಯಕ್ಕೆ ಮತ್ತಷ್ಟು ಕಿಚ್ಚು ಹತ್ತಿಸಿದೆ. ಇದಕ್ಕೆ ಮತ್ತಷ್ಟು ಉಗ್ರ ಸ್ವರೂಪ ನೀಡಿದ್ದು ಮಂಗಳೂರು ವಕೀಲರ ಸಂಘ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿದ ಅಧ್ಯಕ್ಷ ಪೃಥ್ವಿರಾಜ್ ರೈ ನೇತೃತ್ವದ ವಕೀಲರ ಸಂಘದ ಪದಾಧಿಕಾರಿಗಳು, ಪೂಂಜಾಲಕಟ್ಟೆ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ರಾಜ್ಯಾದ್ಯಂತ ಪ್ರತಿಭಟನೆ: ಹಾಸನ ವಕೀಲರ ಸಂಘದ ನೇತೃತ್ವದಲ್ಲೂ ಪ್ರತಿಭಟನೆ ನಡೆದಿದೆ. ಬೆಂಗಳೂರು ವಕೀಲರೂ ಬಂಟ್ವಾಳದ ಪೊಲೀಸರ ಕೃತ್ಯ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಕೋರ್ಟ್ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಅವರೂ ಹೋರಾಟಕ್ಕೆ ಬೆಂಬಲ ನೀಡಿದ್ದು, ಬುಧವಾರ ಕುಂದಾಪುರ ವಕೀಲರೂ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ
ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘಿಸಿದ ದ.ಕ.ಪೊಲೀಸರು !
ವಕೀಲರ ಬಂಧನದ ಬಗ್ಗೆ ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನು ಈಗಾಗಲೇ ನೀಡಿದೆ. ಅರ್ನೇಶ್ ಕುಮಾರ್ Vs ಬಿಹಾರ ಪ್ರಕರಣದಲ್ಲಿ ಹೇಳಲಾದ ಈ ಸೂತ್ರಗಳನ್ನು ಗಾಳಿಗೆ ತೂರಿದ್ದ ಪೂಂಜಾಲಕಟ್ಟೆ ಪೊಲೀಸರು ರಾತೋರಾತ್ರಿ ವಕೀಲರನ್ನು ಬಂಧಿಸಿ ರಾಕ್ಷಸೀ ಪ್ರವೃತ್ತಿ ಮೆರೆದಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ವಕೀಲರಾದ ಕುಲದೀಪ್ ಅವರನ್ನು ಬಂಧಿಸಿದ್ದ ಪೊಲೀಸರು 2022ರ ಡಿಸೆಂಬರ್ 3ರಂದು ಬಂಟ್ವಾಳದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಬಂಧನದ ವೇಳೆ, ಅರ್ನೇಶ್ ಕುಮಾರ್ Vs ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ತತ್ವಗಳನ್ನು ಪಾಲಿಸಿಲ್ಲ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.
ಈ ಬಗ್ಗೆ ಮನವಿ ಪತ್ರವನ್ನು ದಕ್ಷಿಣ ಕನ್ನಡ ಎಸ್‌ಪಿಯವರಿಗೆ ನೀಡಿದ ಮಂಗಳೂರು ವಕೀಲರ ಸಂಘ, ವಕೀಲರನ್ನು ಬಂಧಿಸಿ ಪ್ರಮಾದ ಎಸಗಿರುವ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಪ್ರಕರಣದ ವಿವರ
2022ರ ನವೆಂಬರ್‌ನಿಂದ ಕುಲದೀಪ್ ಮಂಗಳೂರಿನಲ್ಲಿ ವಕೀಲರಾಗಿ ವೃತ್ತಿ ನಡೆಸುತ್ತಿದ್ದು, ಬಂಟ್ವಾಳ ತಾಲ್ಲೂಕಿನ ದೇವಸ್ಯ ಮೂದೂರು ಗ್ರಾಮದಲ್ಲಿ ನೆರೆಹೊರೆಯಲ್ಲಿರುವ ಕೆ ವಸಂತಗೌಡ ಅವರೊಂದಿಗೆ ಆಸ್ತಿ ವಿವಾದ ಹೊಂದಿದ್ದರು. ಈ ಪ್ರಕರಣವು ಬಂಟ್ವಾಳದ ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಇದೆ.
ಈ ಮಧ್ಯೆ, 2022ರ ಡಿಸೆಂಬರ್ 2ರಂದು ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ಸುತೇಶ್ ಎಂಬವರ ನೇತೃತ್ವದಲ್ಲಿ ನಾಲ್ವರು ಪೊಲೀಸರು ಕುಲದೀಪ್ ಮನೆಗೆ ನುಗ್ಗಿ, ಅವರನ್ನು ಹೊರಗೆ ಎಳೆದುಹಾಕಿ ಪುಂಜಾಲಕಟ್ಟೆ ಠಾಣೆಗೆ ಕರೆದೊಯ್ದಿದ್ದರು. ಸಂಜೆ 4 ಗಂಟೆವರೆಗೆ ಅವರನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ಹಾಗೂ ಮನಬಂದಂತೆ ಯುವ ವಕೀಲರ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ, ಡಿಸೆಂಬರ್ 3ರಂದು ಬಂಟ್ವಾಳದ ಮ್ಯಾಜಿಸ್ಟ್ರೇಟ್ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು.
2020ರಲ್ಲಿ ಅಮಾನತಾಗಿದ್ದ ಸುತೇಶ್!
ಸುತೇಶ್ ಅವರ ಸೇವಾ ಹಿನ್ನೆಲೆ ಅಷ್ಟೊಂದು ಶುದ್ಧವಾಗಿಲ್ಲ. ಈ ದರ್ಪದ ಅಧಿಕಾರಿ 2020ರಲ್ಲೂ ಅಮಾನತು ಆಗಿದ್ದರು. ಚಿಕ್ಕಮಗಳೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಎಸಗಿದ್ದ ಆರೋಪದ ಮೇಲೆ ಅಮಾನತು ಆಗಿದ್ದ 11 ಮಂದಿ ಪೊಲೀಸರ ಪೈಕಿ ಸುತೇಶ್ ಕೂಡ ಒಬ್ಬರಾಗಿದ್ದರು.
ಇವರ ವಿರುದ್ಧ ಹಣ ವಸೂಲಿ ಮಾಡಿದ ಆರೋಪವೂ ಇದೆ