
ಕೋರ್ಟಿನಲ್ಲಿ QR Code ಮೂಲಕ ಲಂಚಾವತಾರ: ಪೇಟಿಎಂ ಸ್ಟಿಕ್ಕರ್ ಅಳವಡಿಸಿದ ಜಮಾದಾರ್ ಸಸ್ಪೆಂಡ್!
ಕೋರ್ಟಿನಲ್ಲಿ QR Code ಮೂಲಕ ಲಂಚಾವತಾರ: ಪೇಟಿಎಂ ಸ್ಟಿಕ್ಕರ್ ಅಳವಡಿಸಿದ ಜಮಾದಾರ್ ಸಸ್ಪೆಂಡ್!
ನ್ಯಾಯಾಲಯದಲ್ಲಿ ವಕೀಲರಿಂದ ಭಕ್ಷೀಸು ಪಡೆಯಲು ಜಮಾದಾರ್ ಪೇಟಿಎಂ ಬಳಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್ ಸಿಬ್ಬಂದಿ ರಾಜೇಂದ್ರ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಿಡಿಸದೆ.
ಹೈಕೋರ್ಟ್ ನ್ಯಾ. ಅಜಿತ್ ಸಿಂಗ್ ಅವರ ನ್ಯಾಯಾಲಯದಲ್ಲಿ ಜಮಾದಾರ್ ಆಗಿರುವ ರಾಜೇಂದ್ರ ಕುಮಾರ್ ತಮ್ಮ ಸೊಂಟದ ಬಳಿ ಕ್ಯೂ ಆರ್ ಕೋಡ್ ಹೊಂದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಕೋರ್ಟ್ ಆವರಣದಲ್ಲಿ ವಕೀಲರಿಂದ ಇನಾಮಿನ ರೂಪದಲ್ಲಿ ಪೇಟಿಎಂ ಕ್ಯೂ ಆರ್ ಕೋಡ್ ಪ್ರದರ್ಶಿಸಿ ಜಮಾದಾರ್ ಹಣ ಸಂಗ್ರಹಿಸುತ್ತಿದ್ದ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಂದಾಲ್ ಅವರಿಗೆ ನ್ಯಾ. ಸಿಂಗ್ ಅವರು ಪತ್ರ ಬರೆದಿದ್ದು, ಆರೋಪಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿಕೊಂಡಿದ್ದರು.
'ನ್ಯಾ. ಅಜಿತ್ ಸಿಂಗ್ ಅವರು ಪತ್ರದ ಮುಖೇನ ಮುಖ್ಯ ನ್ಯಾಯಮೂರ್ತಿ ಅವರಿಗೆ ರಾಜೇಂದ್ರ ಕುಮಾರ್ ಅವರು PayTM ಮೂಲಕ ಹಣ ಸಂಗ್ರಹಿಸುತ್ತಿರುವ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸಿಬ್ಬಂದಿ ರಾಜೇಂದ್ರ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ” ಎಂದು ರಿಜಿಸ್ಟ್ರಾರ್ ಜನರಲ್ ಆಶೀಷ್ ಗರ್ಗ್ ತಿಳಿಸಿದ್ದಾರೆ.
ಸಸ್ಪೆಂಡ್ ಅವಧಿಯಲ್ಲಿ ಆರೋಪಿ ರಾಜೇಂದ್ರ ಕುಮಾರ್ ಅವರನ್ನು ನಜರತ್ ವಿಭಾಗಕ್ಕೆ ಹಾಕಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಅವರ ಅನುಮತಿಯ ಹೊರತು ಕರ್ತವ್ಯದ ಸ್ಥಳದಿಂದ ಹೊರಹೋಗದಂತೆ ಆದೇಶ ಮಾಡಲಾಗಿದೆ. ಅನ್ಯ ಯಾವುದೇ ಕೆಲಸ, ಉದ್ಯೋಗ, ವ್ಯವಹಾರ ಯಾ ವೃತ್ತಿಯಲ್ಲಿ ತೊಡಗಿಕೊಂಡಿಲ್ಲ ಎಂಬುದಾಗಿ ಸರ್ಟಿಫಿಕೇಟ್ ಸಲ್ಲಿಸಿದ ಬಳಿಕ ರಾಜೇಂದ್ರ ಕುಮಾರ್‌ಗೆ ಜೀವನ ಭತ್ಯೆ ಪಾವತಿಸಲಾಗುವುದು ಎಂದು ಹೈಕೋರ್ಟ್ ಹೊರಡಿಸಿದ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
Watch Video: