ನ್ಯಾಯಾಂಗ ಅಧಿಕಾರಿಗಳಿಗೆ ನೂತನ ಪಿಂಚಣಿ ನೀತಿ ಕಡ್ಡಾಯವಲ್ಲ, ಐಚ್ಚಿಕ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ರಾಜ್ಯದ ನ್ಯಾಯಾಂಗ ಅಧಿಕಾರಿಗಳಿಗೆ ನೂತನ ಪಿಂಚಣಿ ಪದ್ಧತಿ ಐಚ್ಚಿಕ, ಕಡ್ಡಾಯವಲ್ಲ --- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ದಿನಾಂಕ 1.4.2006 ರ ನಂತರ ರಾಜ್ಯದ ನ್ಯಾಯಾಂಗ ಸೇವೆಗೆ ಸೇರಿದ ಅಧಿಕಾರಿಗಳಿಗೆ ನೂತನ ಪಿಂಚಣಿ ಪದ್ಧತಿಯನ್ನು ಕಡ್ಡಾಯವಾಗಿ ಅನ್ವಯಿಸುವಂತಿಲ್ಲ. ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಅಥವಾ ಹೊಸ ವಂತಿಗೆ ಪಿಂಚಣಿ ಯೋಜನೆಗೆ ಸಮ್ಮತಿ ಯ ಅಸಮ್ಮತಿಯನ್ನು ಸೂಚಿಸುವುದು ಅವರ ಆಯ್ಕೆಗೆ ಒಳಪಟ್ಟಿದೆ ಎಂಬುದಾಗಿ ಮಾನ್ಯ ಕರ್ನಾಟಕ ಹೈಕೋರ್ಟ್ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ, ಮತ್ತಿತರರು ವಿರುದ್ಧ ಕರ್ನಾಟಕ ರಾಜ್ಯ ಸರಕಾರ ಈ ಪ್ರಕರಣದಲ್ಲಿ ದಿನಾಂಕ 28.11.2019 ರಂದು ಮಹತ್ವದ ತೀರ್ಪನ್ನು ನೀಡಿದೆ.
ಕರ್ನಾಟಕ ರಾಜ್ಯ ನ್ಯಾಯಾಂಗ ಸೇವೆಗೆ ಸೇರಿದ ಸುಮಾರು 198 ಮಂದಿ ನ್ಯಾಯಾಂಗ ಅಧಿಕಾರಿಗಳು ಸಲ್ಲಿಸಿದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಮಹಮ್ಮದ್ ನವಾಜ್ ಇವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ.
ನ್ಯಾಯಾಂಗ ಸೇವೆ ನೌಕರಿಯಲ್ಲ, ಹಾಗೂ ನ್ಯಾಯಾಂಗ ಅಧಿಕಾರಿಗಳು ನೌಕರರಲ್ಲ. ಶಾಸಕಾಂಗದ ಸದಸ್ಯರ ಸ್ಥಾನಮಾನವನ್ನು ನ್ಯಾಯಾಂಗ ಅಧಿಕಾರಿಗಳು ಹೊಂದಿರುತ್ತಾರೆ. ನೂತನ ಪಿಂಚಣಿ ಯೋಜನೆಯನ್ನು ರಾಜ್ಯದ ಸರಕಾರಿ ನೌಕರರಿಗೆ ದಿನಾಂಕ 31.3.2006 ರ ಅಧಿಸೂಚನೆ ಮೇರೆಗೆ ಜಾರಿಗೊಳಿಸಲಾಗಿದೆ. ಸದರಿ ನೂತನ ಪಿಂಚಣಿ ಯೋಜನೆಯು ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ.
ಪ್ರಥಮ ನ್ಯಾಯಿಕ ವೇತನ ಆಯೋಗ ಹಾಗೂ ತದನಂತರ ರಚಿಸಲ್ಪಟ್ಟ ನ್ಯಾಯಮೂರ್ತಿ ಪದ್ಮನಾಭನ್ ಸಮಿತಿಯ ವರದಿಯಲ್ಲಿ ನ್ಯಾಯಾಂಗ ಅಧಿಕಾರಿಗಳ ಪಿಂಚಣಿಯ ಬಗ್ಗೆ ಉಲ್ಲೇಖಿಸಲಾಗಿದೆ. ಆ ವರದಿಗಳ ಪ್ರಕಾರ ನೂತನ ಪಿಂಚಣಿ ಪದ್ಧತಿ ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಬದಲಿಗೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸತಕ್ಕಾಗಿದೆ ಎಂಬ ವಾದವನ್ನು ನ್ಯಾಯಾಂಗ ಅಧಿಕಾರಿಗಳ ಸಂಘದ ಪರವಾಗಿ ಮಂಡಿಸಲಾಯಿತು.
ಸರಕಾರದ ಪರ ಮಂಡಿಸಲಾದ ವಾದದ ಪ್ರಕಾರ ಸಂವಿಧಾನದ 309 ನೆಯ ವಿಧಿಯನ್ವಯ ನ್ಯಾಯಾಂಗ ಅಧಿಕಾರಿಗಳ ಸೇವಾ ಸ್ಥಿತಿಗತಿಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಇದೆ. ಸರಕಾರದ ಸೇವಾ ಸಂಬಂಧಿತ ಎಲ್ಲಾ ಆದೇಶಗಳು ನ್ಯಾಯಾಂಗ ಅಧಿಕಾರಿಗಳಿಗೂ ಅನ್ವಯಿಸುತ್ತದೆ. ಆದುದರಿಂದ ದಿನಾಂಕ 1.4.2006 ರ ಬಳಿಕ ರಾಜ್ಯದ ನ್ಯಾಯಾಂಗ ಸೇವೆಗೆ ಸೇರಿದ ಅಧಿಕಾರಿಗಳಿಗೆ ನೂತನ ಪಿಂಚಣಿ ಪದ್ಧತಿ ಅನ್ವಯವಾಗುತ್ತದೆ.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯ ಪೀಠವು ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ವೇತನ ಆಯೋಗ ರಚನೆಯಾಗಿದೆ. ಪ್ರಥಮ ವೇತನ ಆಯೋಗದ ವರದಿ ಹಾಗೂ ನಂತರ ರಚನೆಯಾದ ನ್ಯಾಯಮೂರ್ತಿ ಪದ್ಮನಾಭನ್ ಸಮಿತಿ ವರದಿಯಲ್ಲಿ ನೂತನ ಪಿಂಚಣಿ ಪದ್ಧತಿಯ ಉಲ್ಲೇಖವಿಲ್ಲ. ಬದಲಿಗೆ ನಿಶ್ಚಿತ ಪಿಂಚಣಿ ಪದ್ಧತಿಯ ಉಲ್ಲೇಖವಿರುವುದರಿಂದ ಹಾಗೂ ನ್ಯಾಯಾಂಗ ಅಧಿಕಾರಿಗಳು ಸರಕಾರಿ ನೌಕರರೆಂಬ ಸರಕಾರದ ವಾದ ಒಪ್ಪತಕ್ಕದ್ದಲ್ಲ ಎಂಬ ಅಭಿಪ್ರಾಯದೊಂದಿಗೆ ಅರ್ಜಿಗಳನ್ನು ಪುರಸ್ಕರಿಸಿ ಈ ಕೆಳಗಿನ ಅಂಶಗಳ ಪಾಲನೆಗೆ ನಿರ್ದೇಶನವನ್ನು ನೀಡಿತು
1) ಕರ್ನಾಟಕ ಸರಕಾರದ ಆದೇಶ ಸಂಖ್ಯೆ FD (SPL) 04 PET 2005 ದಿನಾಂಕ 31.3.2006 ಮತ್ತು FD (SPL) 28 PEN ದಿನಾಂಕ 29.3.2010 ಈ ಆದೇಶಗಳು ಕರ್ನಾಟಕ ರಾಜ್ಯದ ನ್ಯಾಯಾಂಗ ಸೇವೆಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ.
2) ನ್ಯಾಯಾಂಗ ಅಧಿಕಾರಿಯ ಸಮ್ಮತಿ ಇಲ್ಲದೆ ನೂತನ ಪಿಂಚಣಿ ಪದ್ಧತಿಯನ್ನು ಅನುಷ್ಠಾನಗೊಳಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಲಾಗಿದೆ.
3) ತತ್ಪರಿಣಾಮವಾಗಿ ನ್ಯಾಯಾಂಗ ಅಧಿಕಾರಿಯ ವೇತನದಿಂದ ನೂತನ ಪಿಂಚಣಿಗಾಗಿ ಯಾವುದೇ ಕಟಾವಣೆ ಮಾಡತಕ್ಕದ್ದಲ್ಲ.
4) ದಿನಾಂಕ 1. 4 .2006 ರ ನಂತರ ಸೇವೆಗೆ ನೇಮಕಗೊಂಡ ಎಲ್ಲಾ ನ್ಯಾಯಾಂಗ ಅಧಿಕಾರಿಗಳಿಗೆ ನೂತನ ಪಿಂಚಣಿ ಪದ್ಧತಿಗೆ ತಮ್ಮ ಸಮ್ಮತಿ ಯಾ ಅಸಮ್ಮತಿ ನೀಡುವ ಆಯ್ಕೆಯ ಅವಕಾಶವನ್ನು ಈ ಆದೇಶದ ದಿನಾಂಕದಿಂದ ನಾಲ್ಕು ವಾರಗಳೊಳಗೆ ನೀಡತಕ್ಕದ್ದು. ದಿನಾಂಕ 31.1.2020 ರೊಳಗೆ ನ್ಯಾಯಾಂಗ ಅಧಿಕಾರಿಗಳು ತಮ್ಮ ಆಯ್ಕೆಯ ಅವಕಾಶವನ್ನು ಬಳಸಿಕೊಳ್ಳತಕ್ಕದ್ದು.
5) ನೂತನ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡದ ನ್ಯಾಯಾಂಗ ಅಧಿಕಾರಿಗಳ ವೇತನದಿಂದ ಈಗಾಗಲೇ ಕಟಾವಣೆಯಾದ ಹಣವನ್ನು ಫೆಬ್ರವರಿ 2020 ರೊಳಗೆ ಅವರಿಗೆ ಮರಳಿಸತಕ್ಕದ್ದು. ನೂತನ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡದ ನ್ಯಾಯಾಂಗ ಅಧಿಕಾರಿಗಳಿಗೆ ದಿನಾಂಕ 1.4.2006 ರ ಪೂರ್ವದಲ್ಲಿ ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯವಾಗುವ ಹಳೆಯ ನಿಶ್ಚಿತ ಪಿಂಚಣಿ ಪದ್ಧತಿಯನ್ನು ಅನುಷ್ಠಾನಗೊಳಿಸತಕ್ಕದ್ದು.
ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದಂತೆ ದಿನಾಂಕ 1.4.2006 ರ ನಂತರ ರಾಜ್ಯದ ನ್ಯಾಯಾಂಗ ಸೇವೆಗೆ ಸೇರಿದ ಎಲ್ಲಾ ನ್ಯಾಯಾಂಗ ಅಧಿಕಾರಿಗಳು ಹಳೆಯ ನಿಶ್ಚಿತ ಪಿಂಚಣಿ ಯೋಜನೆಗೆ ಒಳಪಟ್ಟವರಾಗಿರುತ್ತಾರೆ.
✍️ ಪ್ರಕಾಶ್ ನಾಯಕ್, ಶಿರಸ್ತೆದಾರರು, ನ್ಯಾಯಾಂಗ ಇಲಾಖೆ, ಮಂಗಳೂರು
ಇದನ್ನೂ ಓದಿ:
ಕೋರ್ಟ್‌ನಲ್ಲಿ ಟಿಪ್ಸ್ ಪಡೆಯಲು ಪೇಟಿಎಂ ಬಳಕೆ: ಸಿಬ್ಬಂದಿಯನ್ನು ಅಮಾನತು ಮಾಡಿದ ಹೈಕೋರ್ಟ್
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ