ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ: ಹೈಕೋರ್ಟ್
ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ: ಹೈಕೋರ್ಟ್
ಸಾಲಗಾರರಿಂದ ಅಧಿಕ ಬಡ್ಡಿ ವಸೂಲಿ ಮಾಡುತ್ತಿರುವ ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಸಾಲಗಾರರಿಂದ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ಮಾಡುವುದಾಗಲೀ, ಶೋಧನೆ ಮಾಡಿ ದಾಖಲೆ ವಶಪಡಿಸಿಕೊಳ್ಳುವುದಾಗಲೀ ಮಾಡಲು ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಗೋಕಾಕ ನಿವಾಸಿ ಬಸವರಾಜು ಮತ್ತು ಜಾಕಿರ್ ಹುಸೇನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ಹೇಮಂತ್ ಚಂದನ ಗೌಡ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದೆ.
ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಗೋಕಾಕ್ ಠಾಣಾ ಪೋಲೀಸರು ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದ್ದರು. ಸದ್ರಿ ಪ್ರಕರಣದ ಕುರಿತ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ 2004ರ ಸೆಕ್ಷನ್ 3 ಮತ್ತು ಸೆಕ್ಷನ್ 4ರ ಅಡಿಯಲ್ಲಿ ಅಧಿಕ ಬಡ್ಡಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವ ಮುನ್ನ ತನಿಖೆ ನಡೆಸುವುದು ಕಾನೂನುಬಾಹಿರ.
ಅದೇ ರೀತಿ, ಕರ್ನಾಟಕ ಹಣ ಲೇವಾದೇವಿಗಾರರ ಕಾಯ್ದೆ ಸೆಕ್ಷನ್ 15 ರ ಪ್ರಕಾರ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಅಥವಾ ಸಕ್ಷಮ ಅಧಿಕಾರಿ ಅವರಂತಹ ನಿರ್ದಿಷ್ಟ ಅಧಿಕಾರಿ ಮಾತ್ರ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸಿ ಶೋಧಿಸುವ ಮತ್ತು ದಾಖಲೆ ಯಾ ನಗದು ಜಪ್ತಿ ಮಾಡುವ ಅಧಿಕಾರ ಹೊಂದಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಇವರನ್ನು ಹೊರತುಪಡಿಸಿದ ಯಾವುದೇ ಇಲಾಖೆ, ಪ್ರಾಧಿಕಾರ ಯಾ ವ್ಯಕ್ತಿಗೆ ಆ ಅಧಿಕಾರ ಇಲ್ಲ. ಪೊಲೀಸರು ಕೂಡ ಈ ಅಧಿಕಾರ ಹೊಂದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಲ್ಲದೆ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆಯ ಸೆಕ್ಷನ್ 5ರ ಪ್ರಕಾರ ಅಧಿಕ ಬಡ್ಡಿ ಹೊರೆಯಿಂದ ನೊಂದ ಸಾಲಗಾರರು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸದ್ರಿ ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಪಾಲಿಸದೆ ಪ್ರಕರಣದಲ್ಲಿ ಪೊಲೀಸರು ಮತ್ತು ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ ಎಂದು ಅರ್ಜಿಯನ್ನು ಪುರಸ್ಕರಿಸಿತು.
ಇದನ್ನೂ ಓದಿ:
ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!
ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ