ವಕೀಲರ ಮೇಲೆ ದೌರ್ಜನ್ಯ: ಹಾನಗಲ್ಲ ಪಿಎಸ್‌ಐ ಸಸ್ಪೆಂಡ್, ಎಫ್‌ಐಆರ್ ದಾಖಲು
ವಕೀಲರ ಮೇಲೆ ದೌರ್ಜನ್ಯ: ಹಾನಗಲ್ಲ ಪಿಎಸ್‌ಐ ಸಸ್ಪೆಂಡ್, ಎಫ್‌ಐಆರ್ ದಾಖಲು
ವಕೀಲರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪದ ಮೇಲೆ ಹಾನಗಲ್ ಪೊಲೀಸ್ ಠಾಣೆ ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ವಕೀಲರಾದ ಶಿವು ತಳವಾರ @ ಶಿವಕುಮಾರ ಜಿ. ತಳವಾರ ಎಂಬವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಆರೋಪವನ್ನು ಶ್ರೀಶೈಲ ಎದುರಿಸುತ್ತಿದ್ದರು.
ಹಾವೇರಿಯ ಗೆಜ್ಜಿಹಳ್ಳಿ ಗ್ರಾಮದಲ್ಲಿ ಮಂಜುನಾಥ ಬಾರ್ಕಿ ಎಂಬವರ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ವಕೀಲರು ಭೇಟಿ ನೀಡಿದಾಗ ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ ಅನುಚಿತ ವರ್ತನೆ ತೋರಿದ್ದರು.
ಬಲಗೈ ಮುಷ್ಠಿಯಿಂದ ಮುಖದ ಮೇಲೆ ಗುದ್ದಿ ಕೊರಳಪಟ್ಟಿ ಹಿಡಿದು ನೂಕಿದ್ದಲ್ಲದೆ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಕೀಲರಾದ ಶಿವು ತಳವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಕೀಲರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಕೋಟೇಶ್ವರ ರಾವ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಪೊಲೀಸ್ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು, ಅವರ ವಿರುದ್ಧ ದಾಖಲಾದ ದೂರನ್ನು ಆಧರಿಸಿ ಅವರ ಎಫ್ಐಆರ್ ದಾಖಲಿಸಬೇಕು ಎಂದ ಆಗ್ರಹಿಸಿದ್ದರು.
ವಕೀಲರಿಗೆ ಅವರ ವೃತ್ತಿ ಹಿನ್ನೆಲೆಯಲ್ಲಿ ಕನಿಷ್ಟ ಮರ್ಯಾದೆಯನ್ನೂ ಪೊಲೀಸರು ನೀಡಿಲ್ಲ ಎಂದು ಕೋಟೇಶ್ವರ ರಾವ್ ವಿಷಾದ ವ್ಯಕ್ತಪಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಲಿಖಿತ ಮನವಿಯನ್ನೂ ನೀಡಿದ್ದರು.
ಅಲ್ಲದೆ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿ ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ, ತಕ್ಷಣ ಕಾರ್ಯಪ್ರವೃತ್ತರಾದ ಎಸ್‌ಪಿ ಹನುಮಂತ ರಾಯ ಅವರು ಆರೋಪಿ ಪೊಲೀಸ್ ಅಧಿಕಾರಿಯನ್ನು ತಕ್ಷಣದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದು, ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ಆರಂಭವಾಗಿದೆ.