ಎಸ್‌ಐ ಅಮಾನತಿಗೆ ಆಗ್ರಹ: ಎಸ್‌ಪಿ ಕಚೇರಿಗೆ ಮುತ್ತಿಗೆ- ರಾಜ್ಯವ್ಯಾಪಿ ವಕೀಲರ ನಿರ್ಧಾರ
ಎಸ್‌ಐ ಅಮಾನತಿಗೆ ಆಗ್ರಹ: ಎಸ್‌ಪಿ ಕಚೇರಿಗೆ ಮುತ್ತಿಗೆ- ರಾಜ್ಯವ್ಯಾಪಿ ವಕೀಲರ ನಿರ್ಧಾರ
ಸುಪ್ರೀಂ ಕೋರ್ಟಿನ ಸ್ಪಷ್ಟ ನಿರ್ದೇಶನಗಳನ್ನು ಉಲ್ಲಂಘಿಸಿ ಮಂಗಳೂರು ಯುವ ವಕೀಲರ ಮೇಲೆ ಅಮಾನುಷ ಹಲ್ಲೆ ನಡೆಸಿ ರಾತೋರಾತ್ರಿ ಬಂಧನ ಮಾಡಿರುವ "ಆರೋಪಿ ಸಬ್ ಇನ್ಸ್‌ಪೆಕ್ಟರ್" ಸುತೇಶ್ ಅವರನ್ನು ತಕ್ಷಣ ಅಮಾನತು ಮಾಡಬೇಕು, ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಕೀಲರು ನಿರ್ಣಾಯಕ ಹೋರಾಟವನ್ನು ನಡೆಸಲು ನಿರ್ಧರಿಸಿದ್ದಾರೆ.
ಸೋಮವಾರ ಮಂಗಳೂರಿನ ಹೃದಯ ಭಾಗದಲ್ಲಿ ಇರುವ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಮುತ್ತಿಗೆ ಹಾಕಲು ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಬೆಂಬಲಿಸಿರುವ ಬೆಂಗಳೂರು ವಕೀಲರ ಸಂಘ, ಹಾಸನ, ಶಿವಮೊಗ್ಗ, ಉಡುಪಿ, ಬಂಟ್ವಾಳ, ಕುಂದಾಪುರ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಇದೀಗ ಆರೋಪಿ ಇನ್ಸ್‌ಪೆಕ್ಟರ್ ಸುತೇಶ್ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಿಂದ ಎಸ್‌ಪಿ ಕಚೇರಿಗೆ ವರ್ಗಾವಣೆ ಗೊಂಡಿದ್ದಾರೆ. ಇದು ಅವರು ಮಾಡಿದ ಕೃತ್ಯಕ್ಕೆ ಶಿಕ್ಷೆಯಲ್ಲ ಎಂದು ವಕೀಲರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಆರ್. ಮನೋರಾಜ್ ಅವರು ಸಕ್ರಿಯ ಮಧ್ಯಪ್ರವೇಶದಿಂದ ವಕೀಲರ ಬಂಧನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಅರ್ನೇಶ್ ಕುಮಾರ್ Vs ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ನ್ಯಾಯಪೀಠದ ಮುಂದೆ ವಿವರವಾಗಿ ಹೇಳಿ ವಕೀಲರ ಬಂಧನದ ವೇಳೆ ಕಾನೂನು ಉಲ್ಲಂಘಿಸಿರುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಮತ್ತು ಇದನ್ನು ಕೋರ್ಟ್ ಕೂಡ ಗಮನಿಸಿ ಆದೇಶ ಪ್ರತಿಯಲ್ಲಿ ಆರೋಪಿ ಎಸ್‌ಐ ವಿರುದ್ಧ ಮೇಲಾಧಿಕಾರಿಯಿಂದ ತನಿಖೆ ನಡೆಸುವಂತೆ ನಿರ್ದೇಶನ ಹೊರಡಿಸಲಾಗಿದೆ.
ಆದರೆ, ಇದುವರೆಗೆ ಸುತೇಶ್ ಅವರನ್ನು ಅಮಾನತು ಮಾಡಲಿಲ್ಲ. ಇದಕ್ಕೆ ಕಾಣದ ಕೈಗಳ ಒತ್ತಡ, ಅಧಿಕಾರಿಗಳಿಗೆ ಸಿಕ್ಕಿರುವ ಬೆಂಬಲ ಕಾರಣ ಇರಬಹುದು ಎಂಬ ವಿಷಯ ಕೇಳಿಬರುತ್ತಿದೆ.
ಘಟನೆ ಬಗ್ಗೆ ಜನಪ್ರತಿನಿಧಿಗಳು ಮೌನ..?
ಚುನಾವಣೆ ಘೋಷಣೆಯಾದರೆ ಸಾಕು ನ್ಯಾಯಾಲಯ ಸಂಕೀರ್ಣಕ್ಕೆ ಬಂದು ಮತ ಕೇಳುವ ಸಂಸದರು, ಶಾಸಕರು, ಜನಪ್ರತಿನಿಧಿಗಳು ಮೌನ ವಹಿಸಿರುವುದಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳಲ್ಲೂ ಹಲವಾರು ಮಂದಿ ವಕೀಲರೂ ಆಗಿದ್ದಾರೆ. ವೃತ್ತಿ ಜೀವನದಲ್ಲಿ ಹಲವು ವರ್ಷ ಪ್ರ್ಯಾಕ್ಟೀಸ್ ಮಾಡಿದವರು ಇದ್ದಾರೆ. ಒಬ್ಬ ವಕೀಲನಿಗೆ ಎಲ್ಲ ನಿಯಮ, ಕಾನೂನು ಗಾಳಿಗೆ ತೂರಿ ಹಲ್ಲೆ ನಡೆಸಿದ್ದರೂ ಯಾರೂ ಈ ಘಟನೆಯನ್ನು ಖಂಡಿಸಲಿಲ್ಲ. ತನಿಖೆ ನಡೆಸುವಂತೆ ಆಗ್ರಹಿಸಲಿಲ್ಲ. ಇದು ನಿಜಕ್ಕೂ ವಿಷಾದದ ಸಂಗತಿ ಎಂದು ಜನಪ್ರತಿನಿಧಿಗಳ ಮೌನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:
ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಎಸ್‌ಐ: ವಕೀಲನ ಬಂಧನ ವಿರುದ್ಧ ಭುಗಿಲೆದ್ದ ಆಕ್ರೋಶ