ಸರ್ಕಾರಿ ಅಧಿಕಾರಿ ವಿರುದ್ಧ ಗಂಭೀರ ಆರೋಪಕ್ಕೆ ತಕ್ಷಣ ವರ್ಗಾವಣೆ ಪರಿಹಾರವಲ್ಲ: ಕರ್ನಾಟಕ ಹೈಕೋರ್ಟ್
ಸರ್ಕಾರಿ ಅಧಿಕಾರಿ ವಿರುದ್ಧ ಗಂಭೀರ ಆರೋಪಕ್ಕೆ ತಕ್ಷಣ ವರ್ಗಾವಣೆ ಪರಿಹಾರವಲ್ಲ: ಕರ್ನಾಟಕ ಹೈಕೋರ್ಟ್
ಯಾವುದೇ ಸರ್ಕಾರಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ದಾಖಲಾದರೆ ಅವರನ್ನು ತಕ್ಷಣ ವರ್ಗಾವಣೆ ಮಾಡುವುದು ಪರಿಹಾರ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇಂತಹ ಆರೋಪಕ್ಕೆ ಎದುರಿಸಿದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಅವಧಿ ಪೂರ್ವ ಟ್ರಾನ್ಸ್‌ಫರ್ ಮಾಡಿದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಡಾ. ಬಸನಗೌಡ ಅವರು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದರು. ಅವರ ವಿರುದ್ಧ ಆರೋಪ ಕೇಳಿಬಂದಾಗ ರಾಜ್ಯ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಡಾ. ಬಸನಗೌಡ ಕೆಎಟಿಎಗೆ ಮೇಲ್ಮನವಿ ಸಲ್ಲಸಿದ್ದರು. ಕೆಎಟಿ ಸರ್ಕಾರದ ಆದೇಶ ಕ್ರಮವನ್ನು ರದ್ದುಪಡಿಸಿತ್ತು.
ಕೆಎಟಿಯ ಆದೇಶವನ್ನು ಪ್ರಶ್ನಿಸಿ ಆ ಸ್ಥಾನಕ್ಕೆ ನಿಯೋಜನೆಗೊಂಡಿದ್ದ ಡಾ. ಶಶಿ ಪಾಟೀಲ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ ಸೂರಜ್ ಗೋವಿಂದರಾಜು ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಸರ್ಕಾರಿ ಅಧಿಕಾರಿಯ ವಿರುದ್ಧ ಆರೋಪ ಕೇಳಿಬಂದರೆ ಅದನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಮೂಲಕ ಆಂತರಿಕ ವಿಚಾರಣೆ ನಡೆಸಬೇಕು. ಆರೋಪ ಸಾಬೀತಾದರೆ ಶಿಸ್ತುಕ್ರಮ ಕೈಗೊಳ್ಳಬೇಕು. ಒಂದು ವೇಳೆ, ತನಿಖೆಗೆ ಅಡ್ಡಿ ಆಗುವ ಪರಿಸ್ಥಿತಿ ಇದ್ದರೆ ಅಂತಹ ಸಂದರ್ಭದಲ್ಲಿ ಆ ಆರೋಪಿತ ಅಧಿಕಾರಿಯನ್ನು ಮಧ್ಯಂತರ ಅವಧಿಗೆ ಸಸ್ಪೆಂಡ್ ಮಾಡಬಹುದು. ಆದರೆ, ಈ ಪ್ರಕ್ರಿಯೆ ನಡೆಸದೆ ಏಕಾಏಕಿ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಅಧಿಕಾರಿಯ ವರ್ಗಾವಣೆ ಸಮಸ್ಯೆಗೆ ಪರಿಹಾರವಲ್ಲ. ಅಂತಹ ವರ್ಗಾವಣೆ ಆದೇಶವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಸರ್ಕಾರದ ಅಧಿಕಾರದಿಂದ ತಪ್ಪಿಸಿಕೊಂಡಂತೆ ಆಗುತ್ತದೆ ಎಂದು ಹೇಳಿದ ಹೈಕೋರ್ಟ್, ಕರ್ನಾಟಕ ಆಡಳಿತಾತ್ಮಕ ಟ್ರಿಬ್ಯೂನಲ್ ಆದೇಶವನ್ನು ಪುರಸ್ಕರಿಸಿದೆ. ಇದೇ ವೇಳೆ, ಡಾ. ಬಸನಗೌಡ ವಿರುದ್ಧದ ಆರೋಪ ಕುರಿತು ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಕ್ತವಾಗಿದೆ ಎಂದು ಹೇಳಿದೆ.
ಘಟನೆಯ ಮಾಹಿತಿ
2022ರಲ್ಲಿ ಧಾರವಾಡದಲ್ಲಿ ಡಿಎಚ್‌ಓ ಆಗಿದ್ದ ಡಾ. ಬಸನಗೌಡ ವಿರುದ್ಧ ವ್ಯಾಪಕ ದೂರು ಕೇಳಿಬಂದಿತ್ತು. 100ಕ್ಕೂ ಹೆಚ್ಚು ವೈದ್ಯರು ಡಿಎಚ್‌ಓ ವಿರುದ್ಧ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಸನಗೌಡ ಅವರನ್ನು ಅವಧಿಪೂರ್ವ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಡಾ. ಶಶಿ ಪಾಟೀಲ್ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಕೆಎಟಿಯಲ್ಲಿ ಪ್ರಶ್ನಿಸಿದ ಬಸನಗೌಡ, ಗ್ರೂಪ್ 'ಎ' ವೃಂದದ ಅಧಿಕಾರಿಗಳನ್ನು ಕನಿಷ್ಠ 2 ವರ್ಷಕ್ಕೂ ಕಡಿಮೆ ಅವಧಿಗೆ ಟ್ರಾನ್ಸ್‌ಫರ್ ಮಾಡುವಂತಿಲ್ಲ. ಸದ್ರಿ ಪ್ರಕರಣದಲ್ಲಿ ತಮ್ಮನ್ನು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯೊಳಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಬಸನಗೌಡ ಅರ್ಜಿಯನ್ನು ಪುರಸ್ಕರಿಸಿ ಸರ್ಕಾರದ ಆದೇಶವನ್ನು ಕೆಎಟಿ ರದ್ದುಪಡಿಸಿತ್ತು.
ಇದನ್ನೂ ಓದಿ:
ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!
ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ