ಲಂಚದ ಬೇಡಿಕೆಯೂ ಇಲ್ಲ, ಸ್ವೀಕರಿಸಿಯೂ ಇಲ್ಲ: ಸಬ್‌ರಿಜಿಸ್ಟ್ರಾರ್ ವಿರುದ್ಧದ ಕೇಸು ರದ್ದು- ಕರ್ನಾಟಕ ಹೈಕೋರ್ಟ್
ಲಂಚದ ಬೇಡಿಕೆಯೂ ಇಲ್ಲ, ಸ್ವೀಕರಿಸಿಯೂ ಇಲ್ಲ: ಸಬ್‌ರಿಜಿಸ್ಟ್ರಾರ್ ವಿರುದ್ಧದ ಕೇಸು ರದ್ದು- ಕರ್ನಾಟಕ ಹೈಕೋರ್ಟ್
ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ ಸೆಕ್ಷನ್ 7ರ ಅಡಿ ಅಪರಾಧವಾಗಬೇಕಿದ್ದರೆ ಲಂಚಕ್ಕೆ ಬೇಡಿಕೆ ಇರಬೇಕು ಹಾಗೂ ಲಂಚ ಸ್ವೀಕರಿಸಿರಬೇಕು. ಇದು ಕಡ್ಡಾಯ. ಇದಿಲ್ಲದಿದ್ದರೆ ಕಾಯ್ದೆಯಡಿ ಅಪರಾಧ ಆಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಪೊಲೀಸರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಉಪ ನೋಂದಣಾಧಿಕಾರಿ ಪಿ ಮಂಜುನಾಥ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ನ್ಯಾ ಎಂ ನಾಗಪ್ರಸನ್ನ ಅವರ ನ್ಯಾಯಪೀಠ ರದ್ದುಪಡಿಸಿದೆ.
ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲೇಖಿಸಿದ ಕರ್ನಾಟಕ ಹೈಕೋರ್ಟ್, ಅಪರಾಧ ಆಗಬೇಕಿದ್ದರೆ ಲಂಚ ಬೇಡಿಕೆ ಹಾಗೂ ಸ್ವೀಕೃತಿ ಎರಡೂ ಇರಬೇಕು. ಕೇವಲ ಲಂಚದ ಬೇಡಿಕೆ ಮಾತ್ರವೇ ಆಗಲಿ ಅಥವಾ ಕೇವಲ ಸ್ವೀಕಾರ ಮಾತ್ರವೇ ಆಗಲಿ ಇದ್ದರೆ ಅದು ಅಪರಾಧವಾಗದು ಎಂದಿದೆ.
"ಬಿ ಜಯರಾಜ್ VS ಆಂಧ್ರಪ್ರದೇಶ" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ “ಲಂಚ ಬೇಡಿಕೆ ಇದ್ದರೆ, ಅದನ್ನು ಪಡೆದಿರಬೇಕು. ಅದು ಬಿಟ್ಟು, ಲಂಚ ಬೇಡಿಕೆ ಮಾತ್ರವಾಗಲೀ ಆಗಲಿ ಅಥವಾ ಭ್ರಷ್ಟಾಚಾರದ ಹಣ ಎನ್ನುವ ನೋಟುಗಳನ್ನು ವಶಪಡಿಸಿರುವುದು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ ಕಲಂ 7ರ ಅಡಿ ಅಪರಾಧ ಆಗುವುದಿಲ್ಲ" ಎಂದು ಹೇಳಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
"ಲಂಚ ಸ್ವೀಕೃತಿ ಇಲ್ಲದೆ ಕೇವಲ ಬೇಡಿಕೆಯಾಗಲೀ ಅಥವಾ ಲಂಚದ ಬೇಡಿಕೆ ಇಲ್ಲದೆ ಕೇವಲ ಸ್ವೀಕೃತಿಯಾಗಲೀ ಸೆಕ್ಷನ್ 7ರ ಅಡಿ ಆರೋಪಿಗಳ ವಿರುದ್ಧದ ಅಪರಾಧ ನಿರೂಪಿಸಲು ಸಾಕಾಗದು” ಎಂದು ನ್ಯಾಯಪೀಠ ಹೇಳಿದೆ.
ಒಂದು ನಿರ್ದಿಷ್ಟ ಕೆಲಸ ಮಾಡಿಕೊಡಲು ಲಂಚ ಕೊಡಬೇಕು ಎಂಬ ಬೇಡಿಕೆ ಇಡಬೇಕು, ಹಾಗೆಯೇ, ಲಂಚದ ಹಣವನ್ನು ಆ ಕೆಲಸಕ್ಕಾಗಿ ಆರೋಪಿ ಸ್ವೀಕರಿಸಿರಬೇಕು. ಪ್ರಕರಣದಲ್ಲಿ ಲಂಚವೆನ್ನಲಾದ ಹಣವನ್ನು ಅರ್ಜಿದಾರರ ಮೇಜಿನ ಮೇಲೆ ದೊರೆತಿದೆ. 2022ರ ಫೆಬ್ರವರಿ 24ರಂದು ಉಪ ನೋಂದಣಾಧಿಕಾರಿಯವರಿಗೆ ಕೆಲಸ ಮಾಡಿಕೊಡಲು ದಾಖಲೆ ಸಲ್ಲಿಸಲಾಗಿದೆ. ಅವರು ಅದೇ ದಿನ ಸದ್ರಿ ಕೆಲಸವನ್ನು ಮುಗಿಸಿರುತ್ತಾರೆ. ಹಾಗಿರುವಾಗ, ದಾಖಲೆ ನೀಡಲು ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರೆ ಅದು ಬೇರೆಯದೇ ಪ್ರಕರಣವಾಗುತ್ತಿತ್ತು. ಸದ್ರಿ ಈ ಕೇಸಿನಲ್ಲಿ ದಾಖಲೆ ನೀಡಿ 7 ದಿನಗಳ ನಂತರ, ಅದೂ ಅರ್ಜಿದಾರರ ಮುಂದೆ ಯಾವುದೇ ಕೆಲಸ ಬಾಕಿ ಇರದೇ ಇರುವಾಗ ಮತ್ತು ದಾಖಲೆ ರಿಜಿಸ್ಟರ್ ಆಗಿ 2 ತಿಂಗಳ ಬಳಿಕ ಅಂತಿಮ Trap ನಡೆಸಲಾಗಿದೆ ಎನ್ನುವ ಅಂಶಗಳನ್ನು ನ್ಯಾಯಾಲಯವು ಗಮನಿಸಿತು.
ಲಂಚ ಸ್ವೀಕರಿಸುತ್ತಿರುವಾಗ ಅರ್ಜಿದಾರರನ್ನು ಬಂಧಿಸಲಾಗಿಲ್ಲ. ಕೆಲಸ ಮಾಡುವುದಕ್ಕೆ ಮುನ್ನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರೆ ಮತ್ತು ಅದನ್ನು ಪಡೆದುಕೊಂಡಿದ್ದರೆ ಮಾತ್ರ ಸೆಕ್ಷನ್ 7 ಅನ್ವಯಿಸುತ್ತದೆ. ಲಂಚದ ಹಣಕ್ಕೆ ಡಿಮ್ಯಾಂಡ್ ಮಾಡಿದ 2 ತಿಂಗಳ ಬಳಿಕ trap ಮಾಡಲಾಗಿದೆ. ಪ್ರಾರಂಭಿಕ ಮತ್ತು ಆ ನಂತರದ trap ಎರಡೂ ಯಶಸ್ವಿಯಾಗಿ ನಡೆದಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಇದನ್ನೂ ಓದಿ:
ಲಂಚ ಸ್ವೀಕಾರ: ತಹಶೀಲ್ದಾರ್, ಗುಮಾಸ್ತ ಹಿಂಡಲಗಾ ಜೈಲಿಗೆ
ಮಂಗಳೂರು ಪೊಲೀಸರ ಯಡವಟ್ಟು: ಐದು ಲಕ್ಷ ರೂಪಾಯಿ ದಂಡದ ಶಿಕ್ಷೆಗೆ ಗುರಿಯಾದ ಖಾಕಿ ಪಡೆ!