ಚೆಕ್ ಅಮಾನ್ಯ ಪ್ರಕರಣ: ಹೊಸ ನಿಯಮ, ಕಠಿಣ ಕ್ರಮಕ್ಕೆ ಆರ್‌ಬಿಐ ಚಿಂತನೆ
ಚೆಕ್ ಅಮಾನ್ಯ ಪ್ರಕರಣ: ಹೊಸ ನಿಯಮ, ಕಠಿಣ ಕ್ರಮಕ್ಕೆ ಆರ್‌ಬಿಐ ಚಿಂತನೆ
ದೇಶದಲ್ಲಿ ಹೆಚ್ಚುತ್ತಿರುವ ಚೆಕ್ ಅಮಾನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಚಿಂತನೆ ನಡೆಸಿದೆ.
ಈ ಬಗ್ಗೆ ಕೆಲವೊಂದು ನಿಯಮಗಳನ್ನು ಅಳವಡಿಸುವುದು ಮತ್ತು ಚೆಕ್ ಅಮಾನ್ಯಗೊಂಡ ಗ್ರಾಹಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ನಿಟ್ಟಿನಲ್ಲಿ ಸರ್ಕಾರ ಹೊಸ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ತಜ್ಞರ ಸಮಿತಿ ರಚನೆ
ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಅನುಷ್ಠಾನಕ್ಕೆ ತರಲು ದೃಢ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ಸುಪ್ರೀಂ ಕೋರ್ಟ್‌ನ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಚೆಕ್ ಅಮಾನ್ಯ ಕುರಿತ ಹೊಸ ನಿಯಮಗಳ ಬಗ್ಗೆ ಸಮಿತಿ ಶಿಫಾರಸು ನೀಡಲಿದೆ. ಇದರ ಜೊತೆಗೆ, ಹಣಕಾಸು ಸಚಿವಾಲಯವೂ ಚೆಕ್ ಅಮಾನ್ಯ ಕುರಿತ ಹೊಸ ನಿಯಮಗಳ ಬಗ್ಗೆ ಉನ್ನತ ಮಟ್ಟದ ಸಭೆಯನ್ನೂ ನಡೆಸಿತ್ತು.
ಇನ್ನೊಂದು ಖಾತೆಯಿಂದ ಹಣ ಕಡಿತ?
ಖಾತೆದಾರನು ತನ್ನ ಖಾತೆಯಲ್ಲಿ ಸಾಕಷ್ಟು ಹಣವನ್ನು ಹೊಂದಿಲ್ಲದೇ ಇದ್ದರೂ ಆತ ಚೆಕ್ ನೀಡಿದರೆ, ಆಗ ಚೆಕ್ ಬೌನ್ಸ್ ಆಗುತ್ತದೆ. ಇದನ್ನು ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತರಬಹುದು.
ಸಂಭಾವ್ಯ ನಿಯಮದ ಅಡಿಯಲ್ಲಿ, ವ್ಯಕ್ತಿಯ ಖಾತೆಯಲ್ಲಿ ಸಾಕಷ್ಟು ಹಣದ ಮೊತ್ತ ಇಲ್ಲದಿದ್ದರೆ ಖಾತೆದಾರರ ಇತರ ಬ್ಯಾಂಕ್ ಖಾತೆಗಳಿಂದ ಹಣವನ್ನು ಕಡಿತಗೊಳಿಸಬಹುದು. ಇದಲ್ಲದೆ, ಇತರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು, ಕಾನೂನು ಕ್ರಮದ ರೂಪದಲ್ಲಿ ದಂಡ ವಿಧಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಅನ್ಯ ಖಾತೆ ತೆರೆಯಲು ನಿರ್ಬಂಧ!
ಚೆಕ್ ಬೌನ್ಸ್‌ನ ಹೊಸ ನಿಯಮಗಳ ಅನುಷ್ಠಾನದ ನಂತರ ಒಬ್ಬ ವ್ಯಕ್ತಿಯ ಚೆಕ್ ಬೌನ್ಸ್ ಆಗಿದ್ದರೆ, ನಂತರ ಅವನು ಬೇರೆ ಯಾವುದೇ ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಈ ನಿಯಮ ಅಳವಡಿಕೆಯಿಂದ ಬೌನ್ಸ್ ದರದಲ್ಲಿ ಇಳಿಕೆ ಕಾಣಬಹುದು ಎಂದು ಸರ್ಕಾರ ಆಶಾಭಾವನೆ ವ್ಯಕ್ತಪಡಿಸಿದೆ.
ಸಾಲ ಪಡೆಯಲೂ ಬ್ಯಾಂಕ್‌ಗಳಿಗೆ ಬ್ರೇಕ್!
ನೂತನ ಚೆಕ್ ಅಮಾನ್ಯ ನಿಯಮಗಳೊಂದಿಗೆ, ಚೆಕ್ ಬೌನ್ಸ್ ಅನ್ನು ಲೋನ್ ಡೀಫಾಲ್ಟ್ ಎಂದು ಪರಿಗಣಿಸುವ ಸಾಧ್ಯತೆ ಇದೆ. ಇಂತಹ ಕಾರಣ ತೋರಿಸಿ, ಮತ್ತೆ ಆ ಗ್ರಾಹಕ ಬ್ಯಾಂಕಿನಿಂದ ಸಾಲ ಪಡೆಯಲು ಸಮಸ್ಯೆ ಉಂಟಾಗಬಹುದು.
ಚೆಕ್ ಬೌನ್ಸ್ ಆದರೆ, CIBIL ಸ್ಕೋರ್ ಹದಗೆಡಬಹುದು ಮತ್ತು ಭವಿಷ್ಯದಲ್ಲಿ ಸಾಲ ಪಡೆಯುವಲ್ಲಿ ಸಮಸ್ಯೆಗಳಾಗಬಹುದು.