ಉಪರಾಷ್ಟ್ರಪತಿಗೆ ತೀಕ್ಷ್ಣ ತಿರುಗೇಟು ನೀಡಿದ ಸಿಜೆಐ: ಸಂವಿಧಾನದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಅವರು ಹೇಳಿದ್ದೇನು..?
ಉಪರಾಷ್ಟ್ರಪತಿಗೆ ತೀಕ್ಷ್ಣ ತಿರುಗೇಟು ನೀಡಿದ ಸಿಜೆಐ: ಸಂವಿಧಾನದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಅವರು ಹೇಳಿದ್ದೇನು..?
ಭಾರತದ ಸಂವಿಧಾನ ವ್ಯಾಖ್ಯಾನಿಸುವವರಿಗೆ ಸಂವಿಧಾನದ ಮೂಲ ಸಂರಚನೆ (Basic Structure Doctrine) ಸರಿಯಾದ ಪಾಠವಾಗಿದ್ದು, ಇದು ಧ್ರುವ ನಕ್ಷತ್ರದಂತೆ ಸದಾ ಮಾರ್ಗದರ್ಶನ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಾ. ಧನಂಜಯ ವಿ. ಚಂದ್ರಚೂಡ್ ಹೇಳಿದ್ದಾರೆ.
ದೇಶದ ನ್ಯಾಯಾಂಗ ಘನತೆಯಿಂದ ವರ್ತಿಸಬೇಕು ಎಂಬ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿಕೆಯ ಬೆನ್ನಲ್ಲೇ ಸಿಜೆಐ ಈ ಹೇಳಿಕೆ ನೀಡಿರುವುದು ಉಲ್ಲೇಖಾರ್ಹವಾಗಿದ್ದು, ಉಪ ರಾಷ್ಟ್ರಪತಿಯವರಿಗೆ ಇದೊಂದು ಪರೋಕ್ಷ ಹಾಗೂ ಪರಿಣಾಮಕಾರಿಯಾದ ತಿರುಗೇಟು ಎಂದು ಹೇಳಲಾಗುತ್ತಿದೆ.
ಮುಂಬೈ ವಕೀಲರ ಸಂಘ ಸಂಘಟಿಸಿದ ನಾನೀ ಪಾಲ್ಕೀವಾಲ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಜಸ್ಟಿಸ್ ಚಂದ್ರಚೂಡ್, ಸಂವಿಧಾನದ ಹಾದಿಯಲ್ಲಿ ಕಗ್ಗಂಟು ಉಂಟಾದಾಗ ಸಂವಿಧಾನದ ಮೂಲ ಸಂರಚನೆ ಸದಾ ನೆರವಿಗೆ ಧಾವಿಸುತ್ತದೆ ಎಂದು ಹೇಳಿದ್ದಾರೆ.
1973ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ "ಕೇಶವಾನಂದ ಭಾರತಿ ತೀರ್ಪು" ಪ್ರಮಾದದಿಂದ ಕೂಡಿದೆ ಮತ್ತು ಈ ತೀರ್ಪು ತಪ್ಪು ಪರಂಪರೆಗೆ ನಾಂದಿ ಹಾಡಿದೆ ಎಂದು ರಾಜಸ್ಥಾನದ ಜೈಪುರದಲ್ಲಿ ನಡೆದ 83ನೇ ಅಖಿಲ ಭಾರತ ಸ್ಪೀಕರ್‌ಗಳ ಸಮಾವೇಶದಲ್ಲಿ ಜಗದೀಪ್ ಧನಕರ್ ಹೇಳಿದ್ದು, ನ್ಯಾಯಾಂಗದ ಬಗ್ಗೆ ಟೀಕಾತ್ಮಕ ಹೇಳಿಕೆಯನ್ನು ನೀಡಿದ್ದರು.
ಸಂವಿಧಾನದ ಶ್ರೇಷ್ಟತೆ, ನ್ಯಾಯಾಂಗದ ಆಡಳಿತ, ಅಧಿಕಾರ ಹಂಚಿಕೆ, ನ್ಯಾಯಾಂಗ ವಿಮರ್ಶೆ, ಧರ್ಮನಿರಪೇಕ್ಷತೆ, ಒಕ್ಕೂಟ ತತ್ವ, ಸ್ವಾತಂತ್ರ್ಯ, ವ್ಯಕ್ತಿಯ ಘನತೆ, ರಾಷ್ಟ್ರದ ಏಕತೆ ಮತ್ತು ಸಮಗ್ರತೆ ಮುಂತಾದ ಮಹತ್ವದ ವಿಷಯಗಳು ಸಂವಿಧಾನದ ಮೂಲ ಸಂರಚನಾ ನಿಯಮ ಅಥವಾ ಸಂವಿಧಾನದ ಮೂಲತತ್ವಗಳನ್ನು ಆಧರಿಸಿದೆ ಎಂಬುದನ್ನು ನೆನಪಿಸಿದ ಸಿಜೆಐ ಚಂದ್ರಚೂಡ್, ಬದಲಾದ ಕಾಲಕ್ಕೆ ತಕ್ಕಂತೆ ಸಂವಿಧಾನದ ತಿರುಳನ್ನು ಅರ್ಥೈಸುವಲ್ಲಿ ನ್ಯಾಯಾಧೀಶರ ಕುಶಲತೆ ಅಡಗಿದೆ ಎಂದು ತೀಕ್ಷ್ಣವಾದ ಪ್ರತ್ಯುತ್ತರವನ್ನು ಮಾರ್ಮಿಕವಾಗಿ ಹೇಳಿದರು.
ಸಂವಿಧಾನ ನೀಡಿದ ಹಕ್ಕುಗಳ ರಕ್ಷಣೆಗಾಗಿ ನಾನಿ ಪಾಲ್ಖಿವಾಲಾ ಮಹೋನ್ನತ ಕೊಡುಗೆ ನೀಡಿದ್ದಾರೆ. ಅವರಿಲ್ಲದೇ ಹೋಗಿದ್ದರೆ ನಮ್ಮ ದೇಶಕ್ಕೆ ಮೂಲ ರಚನಾ ಸಿದ್ಧಾಂತ ದೊರೆಯುತ್ತಿರಲಿಲ್ಲ ಎಂದು ಚಂದ್ರಚೂಡ್ ಪಾಲ್ಕೀವಾಲಾ ಅವರ ಗುಣಗಾನ ಮಾಡಿದರು.
.