ವಿಧಾನಸೌಧದಲ್ಲಿ 10 ಲಕ್ಷ ರೂ. ಪತ್ತೆ: ಕಿರಿಯ ಎಂಜಿನಿಯರ್ ಬಂಧನ
ವಿಧಾನಸೌಧದಲ್ಲಿ 10 ಲಕ್ಷ ರೂ. ಪತ್ತೆ: ಕಿರಿಯ ಎಂಜಿನಿಯರ್ ಬಂಧನ
ವಿಧಾನಸೌಧದಲ್ಲಿ 10 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಬಂಧನ ಮಾಡಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಬೆಂಗಳೂರು ವಿಧಾನಸೌಧಕ್ಕೆ ಬಂದಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಜಗದೀಶ್ ಬ್ಯಾಗ್‌ನಲ್ಲಿ 10 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸೌಧ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ
ಮಂಡ್ಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ ಹಣವಿದ್ದ ಬ್ಯಾಗ್ ಸಮೇತ ವಿಧಾನಸೌಧಕ್ಕೆ ಆಗಮಿಸಿದ್ದರು. ಅವರ ಬ್ಯಾಗನ್ನು ಪರಿಶೀಲನೆ ಮಾಡಿದಾಗ ಆ ಬ್ಯಾಗಿನಲ್ಲಿ 10 ಲಕ್ಷ ರೂಪಾಯಿ ಇರುವುದು ಪತ್ತೆಯಾಗಿದೆ ಎಂದು ಕೇಂದ್ರ ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಅಕ್ರಮ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಆರೋಪಿ ಅಧಿಕಾರಿಯನ್ನು ಬಂಧಿಸಲಾಗಿದೆ. ಹಣ ಯಾರಿಗೆ ಸೇರಿದ್ದು? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಎಂಬುದನ್ನು ತಿಳಿಸಲು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಎಚ್ ವಿಶ್ವನಾಥ್, ಇಷ್ಟು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ನಾನು ಹಿಂದೆಂದೂ ಕಂಡಿಲ್ಲ. ನಾನು ಬಹಳ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಈಗ ಸುಳ್ಳು, ಭ್ರಷ್ಟಾಚಾರ, ಬಾಯಿಗೆ ಬಂದಂತೆ ಮಾತನಾಡುವುದು ಜಾಸ್ತಿಯಾಗಿದೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳಲು ಇಂತಹ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಿದ್ದಾರೆ.