"ಅನುಕಂಪದ ಆಧಾರದ ಉದ್ಯೋಗ" ಸಂತ್ರಸ್ತರ ಹಕ್ಕಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
"ಅನುಕಂಪದ ಆಧಾರದ ಉದ್ಯೋಗ" ಸಂತ್ರಸ್ತರ ಹಕ್ಕಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕುಟುಂಬದ ಒಬ್ಬ ಸದಸ್ಯ ಈಗಾಗಲೇ ಸರ್ಕಾರ ಅಧೀನದ ಒಂದು ಸಂಸ್ಥೆಯಲ್ಲಿ ನೌಕರರಾಗಿದ್ದರೆ ಆ ಕುಟುಂಬದ ಮತ್ತೊಬ್ಬ ಸದಸ್ಯನಿಗೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರಿನ ನಿವಾಸಿ ರಂಗನಾಥ್ ಎಂಬುವರು "ಅನುಕಂಪದ ಆಧಾರದಲ್ಲಿ ಉದ್ಯೋಗ" ನೀಡಲು ಒಪ್ಪದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
"ಅನುಕಂಪದ ಆಧಾರದ ಮೇಲೆ ಉದ್ಯೋಗ" ನೀಡಬೇಕು ಎಂಬುದು ಮೃತ ನೌಕರನ ಕುಟುಂಬದ ಸದಸ್ಯರು ಯಾ ಸಂತ್ರಸ್ತರ ಹಕ್ಕಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಮೇಲ್ಮನವಿದಾರರ ಕುಟುಂಬದ ಸದಸ್ಯರು ಈಗಾಗಲೇ KPTCLನಲ್ಲಿ ನೌಕರಿ ಹೊಂದಿದ್ದಾರೆ. ಹಾಗಾಗಿ, ಅರ್ಜಿದಾರರಿಗೂ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಂದು ಉದ್ಯೋಗ ನೀಡಲಾಗದು ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿದೆ.
ಪ್ರಕರಣದ ವಿವರ
ರಾಮಯ್ಯ ಎಂಬವರು KPTCLನಲ್ಲಿ ನೌಕರರಾಗಿದ್ದು, 2002ರ ಅಕ್ಟೋಬರ್ 7ರಂದು ನಾಪತ್ತೆಯಾಗಿದ್ದರು. 2010ರಲ್ಲಿ ಅನುಕಂಪದ ಆಧಾರದಲ್ಲಿ ತಮಗೆ ಉದ್ಯೋಗ ನೀಡುವಂತೆ ಕೋರಿ ರಂಗನಾಥ್ ತಾಯಿ ಸಲ್ಲಿಸಿದ್ದ ಅರ್ಜಿಯನ್ನು KPTCL ತಿರಸ್ಕರಿಸಿತ್ತು.
ಆ ನಂತರ, ತಂದೆ ನಾಪತ್ತೆ ಆದ ಕಾರಣ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿದ್ದ ಪುತ್ರ ರಂಗನಾಥ್, ತಂದೆ ಹೆಸರಿನಲ್ಲಿ ಮರಣ ಪತ್ರ ನೀಡಲು BBMPಗೆ ಆದೇಶಿಸುವಂತೆ ಕೋರಿದ್ದರು. ಸಿವಿಲ್ ನ್ಯಾಯಾಲಯ ಈ ದಾವೆ ಪುರಸ್ಕರಿಸಿತ್ತು. BBMP ರಾಮಯ್ಯ ಹೆಸರಿನಲ್ಲಿ 2011ರಲ್ಲಿ ಮರಣ ಪ್ರಮಾಣ ಪತ್ರ ನೀಡಿತ್ತು.
ಇದಾದ ನಂತರ, 2012ರಲ್ಲಿ ಪುತ್ರ ರಂಗನಾಥ್ ಹೈಕೋರ್ಟ್ ಮೆಟ್ಟಿಲೇರಿ ಅನುಕಂಪದ ಆಧಾರದಲ್ಲಿ ತಮಗೆ ನೌಕರಿ ನೀಡಲು ಕೆಪಿಟಿಸಿಎಲ್‌ಗೆ ಸೂಚಿಸುವಂತೆ ಕೋರಿದ್ದರು. ಈ ಅರ್ಜಿಯನ್ನು ಕಾನೂನು ರೀತ್ಯಾ ಪರಿಗಣಿಸುವಂತೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ KPTCLಗೆ ನಿರ್ದೇಶಿಸಿತ್ತು.
ಪ್ರಕರಣವನ್ನು ಇತ್ಯರ್ಥ ಮಾಡಿದ್ದ KPTCL, ರಂಗನಾಥ್ ಕುಟುಂಬದ ಸದಸ್ಯರು ಅದೇ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಅದೇ ಕುಟಂಬದ ಮತ್ತೊಬ್ಬ ಸದಸ್ಯರಿಗೆ ನೌಕರಿ ಕಲ್ಪಿಸಲಾಗದು ಎಂದು ತಿಳಿಸಿ 2013ರಲ್ಲಿ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ರಂಗನಾಥ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು 2014ರಲ್ಲಿ ಇತ್ಯರ್ಥಪಡಿಸಿದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಕೆಪಿಟಿಸಿಎಲ್ ಆದೇಶವನ್ನು ಎತ್ತಿಹಿಡಿದಿತ್ತು. ಆ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.