ಭ್ರಷ್ಟಾಚಾರ ಆರೋಪ: ಅಂಬೇಡ್ಕರ್ ನಿಗಮದ ಎಂ.ಡಿ. ಕೆಎಎಸ್ ಅಧಿಕಾರಿ ಕೆ.ಎಂ. ಸುರೇಶ್ ಕುಮಾರ್ ಅಮಾನತು
ಭ್ರಷ್ಟಾಚಾರ ಆರೋಪ: ಅಂಬೇಡ್ಕರ್ ನಿಗಮದ ಎಂ.ಡಿ. ಕೆಎಎಸ್ ಅಧಿಕಾರಿ ಕೆ.ಎಂ. ಸುರೇಶ್ ಕುಮಾರ್ ಅಮಾನತು
ಗಂಭೀರ ಸ್ವರೂಪದ ದುರ್ನಡತೆ, ಕರ್ತವ್ಯ ಲೋಪ ಮತ್ತು ಅಪಾರ ಭ್ರಷ್ಟಾಚಾರದ ಆರೋಪ ಮೇಲೆ ಅಂಬೇಡ್ಕರ್ ನಿಗಮದ ಎಂ.ಡಿ. ಕೆಎಎಸ್ ಅಧಿಕಾರಿ ಕೆ.ಎಂ. ಸುರೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ DPAR ಈ ಆದೇಶ ಹೊರಡಿಸಿದ್ದು, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಲಾಗಿದೆ.
ಅರ್ಜಿಯನ್ನೇ ಸಲ್ಲಿಸದ 92 ಮಂದಿ ಫಲಾನುಪೇಕ್ಷಿಗಳಿಗೆ ಸೌಲಭ್ಯ ನೀಡಿರುವುದು, 2019-20ನೇ ಸಾಲಿನಲ್ಲಿ ಬಿಡುಗಡೆಯಾದ ಐರಾವತ ಮತ್ತು ಸಮೃದ್ಧಿ ಯೋಜನೆಯನ್ನು ಅನುಷ್ಟಾನ ಮಾಡದಿರುವುದು, ಆ ಅನುದಾನವನ್ನು 2022ರಲ್ಲಿ ಬಳಸಿ 2018-19ನೇ ಸಾಲಿನ ಯೋಜನೆಗಳಲ್ಲಿ ಅರ್ಜಿಯನ್ನೇ ಸಲ್ಲಿಸದಿರುವ ವ್ಯಕ್ತಿಗಳಿಗೆ ಮಂಜೂರಾತಿ ಮಾಡಿದ ಆರೋಪವನ್ನು ಕೆ.ಎಂ. ಸುರೇಶ್ ಕುಮಾರ್ ಎದುರಿಸುತ್ತಿದ್ದಾರೆ.
ಲಭ್ಯ ದಾಖಲೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಶಿಫಾರಸ್ಸುಗಳನ್ನು ಪರಿಶೀಲಿಸಿದಾಗ ಈ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗುವಂತೆ ಇದೆ. ಹೀಗಾಗಿ ಕೆಎಎಸ್ ಶ್ರೇಣಿಯ ಆರೋಪಿ ಅಧಿಕಾರಿ ಅದೇ ಹುದ್ದೆಯಲ್ಲಿ ಮುಂದುವರಿದರೆ ಸಾಕ್ಷ್ಯ ನಾಶಪಡಿಸುವ ಮತ್ತು ನ್ಯಾಯಯುತ-ನಿಷ್ಟಕ್ಷಪಾತ ತನಿಖೆಗೆ ಅಡ್ಡಿಯಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಆದೇಶವನ್ನು ಮಾಡಲಾಗಿದೆ.
ಅಮಾನತು ಅವಧಿಯಲ್ಲಿ ಅಧಿಕಾರಿಯು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆಯುವಂತಿಲ್ಲ ಎಂಬ ಕಟ್ಟುನಿಟ್ಟಾದ ಆದೇಶವನ್ನು ಮಾಡಲಾಗಿದೆ.