ಮಂಗಳೂರು ವಕೀಲರ ಮೇಲೆ ಹಲ್ಲೆ: ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶವೇಕೆ?- ಪೊಲೀಸರ ಚಳಿ ಬಿಡಿಸಿದ ಕರ್ನಾಟಕ ಹೈಕೋರ್ಟ್
ಮಂಗಳೂರು ವಕೀಲರ ಮೇಲೆ ಹಲ್ಲೆ: ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶವೇಕೆ?- ಪೊಲೀಸರ ಚಳಿ ಬಿಡಿಸಿದ ಕರ್ನಾಟಕ ಹೈಕೋರ್ಟ್
ಸ್ಪಷ್ಟ ನಿರ್ದೇಶನ, ಸೂಚನೆ ಇದ್ದರೂ ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಡಿಜಿಪಿ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿದೆ ಎಂದು ರಾಜ್ಯ ಪೊಲೀಸರ ಮೇಲೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳೂರಿನ ಯುವ ವಕೀಲ ಕುಲದೀಪ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ, ಮೌಖಿಕವಾಗಿ ಪೊಲೀಸರಿಗೆ ಕಠಿಣ ಎಚ್ಚರಿಕೆಯನ್ನು ನೀಡಿದೆ.
ಪೊಲೀಸರು ಸಿವಿಲ್ ವ್ಯಾಜ್ಯದಲ್ಲಿ ಅನಗತ್ಯವಾಗಿ ಮೂಗುತೂರಿಸುತ್ತಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರ ಸ್ಪಷ್ಟ ನಿರ್ದೇಶ ಇದ್ದರೂ ಅದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಅಧಿಕಾರ ವ್ಯಾಪ್ತಿಗೆ ವಿರುದ್ಧವಾಗಿ ನಡೆಸುವ ಇಂತಹ ಸವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರಿಗೆ ನ್ಯಾಯಪೀಠ ತಪರಾಕಿ ಹಾಕಿತು.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್‌ಐ ಕೆ. ಪಿ. ಸುತೇಶ್ ವಕೀಲರ ಮೇಲೆ ಅಕ್ರಮವಾಗಿ ಹಲ್ಲೆ ನಡೆಸಿರುವುದನ್ನು ಪ್ರಶ್ನಿಸಿ ವಕೀಲ ಕುಲದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಆದೇಶಕ್ಕೆ ಕಾಯ್ದಿರಿಸಿದೆ.
ಸದ್ರಿ ಪ್ರಕರಣದ ಕೇಂದ್ರ ಬಿಂದು ಗೇಟ್. ಅಲ್ಲಿ ಅವರು ಹೊಡೆದಾಡಿಕೊಂಡರೆ ನೀವು ಅಲ್ಲಿ ಮಾಡುವುದೇನಿದೆ..? ದೂರುದಾರ ಪ್ರಭಾವಿ ಎಂದಾಕ್ಷಣ ನೀವು ಏನೆಲ್ಲ ಮಾಡುತ್ತೀರಿ ಎಂದು ನ್ಯಾಯಪೀಠ ಪೊಲೀಸರಿಗೆ ಕಠಿಣ ಶಬ್ದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿತು.
ವಕೀಲರ ಸಂಘದಲ್ಲಿ ಕುಲದೀಪ್ ನೋಂದಣಿಯಾಗಿ 20 ದಿನಗಳೂ ಕಳೆದಿಲ್ಲ. ಆಗಲೇ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಯುವ ವಕೀಲ ಕುಲದೀಪ್ ಅವರಿಗೆ ಪರಿಹಾರ ನೀಡಬೇಕು. ಪರಿಹಾರದ ಹಣವನ್ನು ಆರೋಪಿ ಪೊಲೀಸರಿಂದ ವಸೂಲಿ ಮಾಡಬೇಕು ಎಂದು ಅಭಿಪ್ರಾಯಪಟ್ಟಿತು.
ವಕೀಲರ ಮೇಲೆ ನಡುರಾತ್ರಿ ಹಲ್ಲೆ ನಡೆಸಿ ರಾತ್ರಿ ಬಂಧಿಸಲಾಗಿದೆ. ಬಂಧನಕ್ಕೆ ಮೊದಲು ವಕೀಲರಿಗೆ ಚಿತ್ರಹಿಂಸೆ ನೀಡಲಾಗಿದೆ. ಇದನ್ನು ವೈದ್ಯಕೀಯ ದಾಖಲೆಗಳೂ ದೃಢಪಡಿಸುತ್ತವೆ. ಸದರಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಕೀಲರಿಗೆ ಜಾಮೀನು ನೀಡಿದೆ.
ಪೊಲೀಸರು ವಕೀಲರ ಮೇಲೆ ನಡೆಸಿದ ಹಲ್ಲೆ ಬಗ್ಗೆ ವಿಚಾರಣಾ ನ್ಯಾಯಾಲಯ ಆದೇಶದಲ್ಲಿ ದಾಖಲಿಸಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ, ಆರೋಪಿ ಸಬ್‌ಇನ್‌ಸ್ಪೆಕ್ಟರ್ ಕೆ ಪಿ ಸುತೇಶ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ ಮಾಡಿ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಗಿತ್ತು.
ತದನಂತರ, ಕುಲದೀಪ್ ಅವರು, ಸುತೇಶ್ ವಿರುದ್ಧ ಡಿಸೆಂಬರ್ 9ರಂದು ದೂರು ನೀಡಿದ್ದರು. ಅದಕ್ಕೂ ಮುನ್ನ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕುಲದೀಪ್ ಹೇಳಿಕೆ ದಾಖಲಿಸಿಕೊಂಡಿದ್ದರೂ ಎಫ್‌ಐಆರ್ ದಾಖಲಿಸಿಕೊಳ್ಳಲಿಲ್ಲ. ಹಾಗಾಗಿ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಅರ್ಜಿದಾರರು ನ್ಯಾಯಪೀಠದ ಮುಂದೆ ನಿವೇದಿಸಿಕೊಂಡಿದ್ದರು.