4 ವರ್ಷಗಳ ನಂತರ ಇಲಾಖಾ ತನಿಖೆ ಅನೂರ್ಜಿತ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
4 ವರ್ಷಗಳ ನಂತರ ಇಲಾಖಾ ತನಿಖೆ ಅನೂರ್ಜಿತ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ನಾಲ್ಕು ವರ್ಷಗಳ ನಂತರ ನಿವೃತ್ತ ಸರಕಾರಿ ನೌಕರರ ವಿರುದ್ಧ ಕೈಗೊಳ್ಳುವ ಇಲಾಖಾ ವಿಚಾರಣೆ ಕಾನೂನಿನಡಿ ಊರ್ಜಿತವಲ್ಲ - ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸರಕಾರಿ ನೌಕರರ ಸೇವಾ ಜೀವನದಲ್ಲಿ ಕರ್ತವ್ಯ ನಿರ್ಲಕ್ಷತೆ, ಬೇಜವಾಬ್ದಾರಿತನ ಮುಂತಾದ ದುರ್ನಡತೆ ಎಸಗಿದ ಘಟನೆ ನಡೆದು ನಾಲ್ಕು ವರ್ಷಗಳಾಗಿದ್ದರೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 214(2)(ಬಿ)(ii) ಅಡಿಯಲ್ಲಿ ನಿವೃತ್ತ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಯಾವುದೇ ಶಿಸ್ತುಕ್ರಮ, ಇಲಾಖೆ ವಿಚಾರಣೆ ಹಾಗೂ ತನಿಖೆ ನಡೆಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕ ಸದಸ್ಯ ನ್ಯಾಯ ಪೀಠವು ಅನಿಲ್ ಕುಮಾರ್ ಮತ್ತೊಬ್ಬರು ವಿರುದ್ಧ ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ದಿನಾಂಕ 16.11.2022 ರಂದು ಮಹತ್ವದ ತೀರ್ಪನ್ನು ನೀಡಿದೆ.
ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ರಿಟ್ ಅರ್ಜಿದಾರರಾದ ಅನಿಲ್ ಕುಮಾರ್ ಮತ್ತು ಟಿ. ಮಲ್ಲಣ್ಣ ಕರ್ನಾಟಕ ಗೃಹ ಮಂಡಳಿಯಲ್ಲಿ ಕಾರ್ಯ ಪಾಲಕ ಅಭಿಯಂತರ ಹುದ್ದೆಯಲ್ಲಿ ಸೇವೆ ಸಲ್ಲಿಸಿ ದಿನಾಂಕ 30.6.2018 ಮತ್ತು 31.8.2020 ರಂದು ಸೇವೆಯಿಂದ ವಯೋನಿವೃತ್ತಿ ಹೊಂದಿದ್ದರು.
ನಿವೃತ್ತಿಯ ಬಳಿಕ 2005-06 ರ ಸಾಲಿನಲ್ಲಿ ನಡೆದ ಘಟನೆಯ ಆಧಾರದಲ್ಲಿ ರಿಟ್ ಅರ್ಜಿದಾರರ ವಿರುದ್ಧ ಇಲಾಖಾ ವಿಚಾರಣೆಯನ್ನು ಕೈಗೆತ್ತಿಕೊಂಡ ಕರ್ನಾಟಕ ಗೃಹ ಮಂಡಳಿಯು ಅರ್ಜಿದಾರರಿಗೆ ದಿನಾಂಕ 21.6.2022 ರಂದು ದೋಷಾರೋಪಣಾ ಪತ್ರವನ್ನು ಜಾರಿಗೊಳಿಸಿತು.
ಸದರಿ ದೋಷಾರೋಪಣಾ ಪತ್ರದ ಮೊದಲನೆಯ ಆರೋಪ ಹೀಗಿತ್ತು.
"ಶ್ರೀ ಟಿ.ಮಲ್ಲಣ್ಣ, ಕಾರ್ಯಪಾಲಕ ಅಭಿಯಂತರರು, ಸಮನ್ವಯ ಕಚೇರಿ, ಗುಲ್ಬರ್ಗ ಹಾಗೂ ಶ್ರೀ ಅನಿಲ್ ಕುಮಾರ್, ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಕೇಂದ್ರ ಕಚೇರಿ, ಬೆಂಗಳೂರು ಆದ ನೀವುಗಳು ಹಿಂದೆ ಬೆಳಗಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬೇಜವಾಬ್ದಾರಿತನ ಹಾಗೂ ಕರ್ತವ್ಯ ನಿರ್ಲಕ್ಷತೆಯಿಂದ ಬೆಳಗಾಂ ಜಿಲ್ಲೆಯ ಕಂಕನವಾಡಿ ಗ್ರಾಮದ ರಾಮದುರ್ಗ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್ 7 ಎ ಹಾಗೂ 8 ಎ ಯಲ್ಲಿ 15.19 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಶಿಫಾರಸು ಮಾಡಿ ತದನಂತರ ಉಪವಿಭಾಗಾಧಿಕಾರಿ ಬೈಲಹೊಂಗಲರವರು ದಿನಾಂಕ 26.8.2006 ರಂದು ಸದರಿ ಜಮೀನುಗಳಲ್ಲಿ ಟ್ರಯಲ್ ಪಿಟ್ ಗಳನ್ನು ಹಾಕಿದ್ದು ಎಂಟರಿಂದ ಹತ್ತು ಅಡಿ ತಗ್ಗು ತೋಡಲಾಗಿದ್ದರೂ ಗಟ್ಟಿ ಪಾಯ ಇರುವುದಿಲ್ಲ ಎಂಬುದಾಗಿ ತಿಳಿಸಿದರೂ ಸದರಿ ಜಮೀನಿನಲ್ಲಿ ವಸತಿ ಯೋಜನೆ ಕೈಗೊಂಡು ಭಾಗಶಃ ಕಾಮಗಾರಿ ಅನುಷ್ಠಾನಗೊಳಿಸಿ ನಂತರ ಪ್ರವಾಹದಿಂದ ಮುಳುಗಡೆಯಾಗುತ್ತಿದೆ ಎಂಬ ಕಾರಣದಿಂದ ಸದರಿ ಕಾಮಗಾರಿಗೆ 1.99 ಕೋಟಿ ವೆಚ್ಚ ಭರಿಸಿ ಮಂಡಳಿಗೆ ಆರ್ಥಿಕ ನಷ್ಟ ಉಂಟು ಮಾಡಿರುತ್ತೀರಿ. ಇದು ನಿಮ್ಮ ಉದಾಸೀನತೆ ಹಾಗೂ ಕರ್ತವ್ಯ ಲೋಪವನ್ನು ತೋರಿಸುತ್ತದೆ."
ಮೇಲ್ಕಾಣಿಸಿದ ಆರೋಪದಲ್ಲಿ ಬೇಜವಾಬ್ದಾರಿತನ ಹಾಗೂ ಕರ್ತವ್ಯ ನಿರ್ಲಕ್ಷದ ಘಟನೆಯು 2006 ರಲ್ಲಿ ನಡೆದಿರುತ್ತದೆ ಎಂದು ಸ್ಪಷ್ಟವಾಗಿ ಕಾಣಿಸಲಾಗಿದೆ.
ರಿಟ್ ಅರ್ಜಿದಾರರ ಪರವಾಗಿ ಈ ಕೆಳಗಿನ ವಾದವನ್ನು ಮಂಡಿಸಲಾಯಿತು.
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 214 (2)(ಬಿ)(ii) ರ ಪ್ರಕಾರ ನಿವೃತ್ತ ಸರಕಾರಿ ನೌಕರರ ವಿರುದ್ಧ ನಿವೃತ್ತಿಯ ನಾಲ್ಕು ವರ್ಷಕ್ಕೂ ಹಿಂದಿನ ಘಟನೆಯ ಆಧಾರದಲ್ಲಿ ಇಲಾಖಾ ವಿಚಾರಣೆಯನ್ನು ನಡೆಸುವುದು ನಿಯಮಾನುಸಾರ ಊರ್ಜಿತವಲ್ಲ. ಆದುದರಿಂದ ಅರ್ಜಿದಾರರ ವಿರುದ್ಧ ರಚಿಸಲಾದ ದೋಷಾರೋಪಣಾ ಪತ್ರ ನಿಯಮಬಾಹಿರವಾಗಿದೆ. ವಿಚಾರಣೆಯ ದಿನಾಂಕಕ್ಕಿಂತ ನಾಲ್ಕು ವರ್ಷಗಳ ಹಿಂದಿನ ಘಟನೆಯನ್ನು ಆಧಾರವಾಗಿಟ್ಟು ದುರ್ನಡತೆ ಎಸಗಿದ್ದಾರೆ ಎಂದು ತೀರ್ಮಾನಿಸಿ ನಿವೃತ್ತ ನೌಕರರ ವಿರುದ್ಧ ನಡೆಸುತ್ತಿರುವ ಇಲಾಖಾ ವಿಚಾರಣೆಗೆ ಕಾನೂನಿನ ಬೆಂಬಲವಿಲ್ಲ. ಆದುದರಿಂದ ಇಲಾಖಾ ವಿಚಾರಣೆ ಹಾಗೂ ದೋಷಾರೋಪಣಾ ಪತ್ರವನ್ನು ರದ್ದು ಪಡಿಸಬೇಕಾಗಿ ರಿಟ್ ಅರ್ಜಿದಾರರ ಪರವಾಗಿ ಮಾನ್ಯ ಹೈಕೋರ್ಟ್ ನಲ್ಲಿ ಪ್ರಾರ್ಥಿಸಲಾಯಿತು.
ಕರ್ನಾಟಕ ಗೃಹ ಮಂಡಳಿ (ಕೆ.ಎಚ್.ಬಿ.) ಪರವಾಗಿ ಈ ಕೆಳಗಿನಂತೆ ವಾದವನ್ನು ಮಂಡಿಸಲಾಯಿತು.
ಕರ್ನಾಟಕ ಗೃಹ ಮಂಡಳಿಯು ದಿನಾಂಕ 28.9.2013ರಂದು ರಿಟ್ ಅರ್ಜಿದಾರರು ಸೇವೆಯಲ್ಲಿದ್ದಾಗಲೇ ಬೇಜವಾಬ್ದಾರಿ ಮತ್ತು ಕರ್ತವ್ಯ ನಿರ್ಲಕ್ಷತೆಯ ದುರ್ನಡತೆಯ ಕಾರಣಕ್ಕಾಗಿ ರಿಟ್ ಅರ್ಜಿದಾರರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿತ್ತು. ದಿನಾಂಕ 21.8.2014 ರಂದು ಸದರಿ ಇಲಾಖಾ ವಿಚಾರಣೆಯಲ್ಲಿ ರಿಟ್ ಅರ್ಜಿದಾರರು ದೋಷ ಮುಕ್ತರಾಗಿದ್ದರು.
ತದನಂತರ ಸರಕಾರದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸಿನಂತೆ ವಿಚಾರಣೆಯನ್ನು ನಡೆಸಲಾಗಿರುತ್ತದೆ. ಆದುದರಿಂದ ಪ್ರಸ್ತುತ ನಡೆಯುತ್ತಿರುವ ಇಲಾಖೆ ವಿಚಾರಣೆಯು ಹಿಂದೆ ನಡೆದ ಇಲಾಖಾ ವಿಚಾರಣೆಯ ಮುಂದುವರಿದ ಭಾಗವಾಗಿದೆ. ಆದುದರಿಂದ ದೋಷಾರೋಪಣಾ ಪತ್ರ ನಿಯಮಾನುಸಾರ ಊರ್ಜಿತವಾಗಿದೆ.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಮಾನ್ಯ ಹೈಕೋರ್ಟ್ ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ದೋಷಾರೋಪಣಾ ಪತ್ರವನ್ನು ಓದಿದಾಗ ರಿಟ್ ಅರ್ಜಿದಾರರ ವಿರುದ್ಧ ಹೊರಿಸಲಾದ ಆರೋಪವು 2006 ನೆಯ ಇಸವಿಯಲ್ಲಿ ಸಂಭವಿಸಿದ ಘಟನೆಗೆ ಸಂಬಂಧಪಟ್ಟದ್ದಾಗಿದೆ ಎಂದು ಕಂಡುಬರುತ್ತದೆ. ಕೆ.ಸಿ. ಎಸ್. ಆರ್ ನಿಯಮ 214(2)(ಬಿ)(ii) ಪ್ರಕಾರ ಸರಕಾರಿ ನೌಕರರ ವಿರುದ್ಧ ಹೊರಿಸಲಾದ ಆರೋಪಗಳು ನಾಲ್ಕು ವರ್ಷಗಳಿಗೂ ಹಿಂದಿನ ಘಟನೆಗೆ ಸಂಬಂಧಪಟ್ಟಿದ್ದಲ್ಲಿ ಇಲಾಖಾ ವಿಚಾರಣೆ ನಡೆಸುವಂತಿಲ್ಲ. ಮೇಲ್ಕಾಣಿಸಿದ ನಿಯಮವು ಕರ್ನಾಟಕ ಗೃಹ ಮಂಡಳಿಯ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಆದುದರಿಂದ ಕರ್ನಾಟಕ ಗೃಹ ಮಂಡಳಿಯು ನಾಲ್ಕು ವರ್ಷಗಳಿಗೂ ಹಿಂದಿನ ಘಟನೆಗೆ ಸಂಬಂಧಿಸಿದಂತೆ ನೌಕರರ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಿರುವುದು ಕಾನೂನಿನಡಿ ಊರ್ಜಿತವಲ್ಲ.
ದೋಷಾರೋಪಣಾ ಪತ್ರದ ದಿನಾಂಕ 21-6-2022 ಆಗಿದೆ. ಬೇಜವಾಬ್ದಾರಿ ಮತ್ತು ಕರ್ತವ್ಯ ನಿರ್ಲಕ್ಷತೆಯ ಘಟನೆ ನಡೆದ ದಿನಾಂಕ 26.8.2006 ಎಂಬುದಾಗಿ ದೋಷಾರೋಪಣಾ ಪತ್ರದಲ್ಲಿ ನಮೂದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿರುವುದು ಕೆಸಿಎಸ್ಆರ್ ನಿಯಮ 214 (2)(b)(ii) ರ ಉಲ್ಲಂಘನೆಯಾಗಿದ್ದು ನಿಯಮಬಾಹಿರವಾಗಿದೆ.
ಮೇಲ್ಕಾಣಿಸಿದ ಕಾರಣಗಳಿಗಾಗಿ ಅರ್ಜಿದಾರರ ವಿರುದ್ಧ ನಡೆಸಿರುವ ಇಲಾಖಾ ವಿಚಾರಣೆ ಹಾಗೂ ದಿನಾಂಕ 21.6.2022 ರ ದೋಷಾರೋಪಣಾ ಪತ್ರವನ್ನು ಮಾನ್ಯ ಹೈಕೋರ್ಟ್ ರದ್ದುಪಡಿಸಿತು. ತಡೆಹಿಡಿಯಲಾದ ಎರಡನೇ ರಿಟ್ ಅರ್ಜಿದಾರರ ನಿವೃತ್ತಿ ಸೌಲಭ್ಯಗಳನ್ನು ಮೂರು ತಿಂಗಳೊಳಗೆ ಬಿಡುಗಡೆಗೊಳಿಸುವಂತೆ ಆದೇಶಿಸಿತು.
✍️ ಪ್ರಕಾಶ್ ನಾಯಕ್ಮ ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ
ಇದನ್ನೂ ಓದಿ
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು
ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!
2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 1
2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 2
2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 3