ಆಸ್ತಿ ವರ್ಗಾವಣೆ ಬಳಿಕ ಮಗಳಿಂದ ಕಡೆಗಣಿನೆ: ತಾಯಿಗೆ ಆಸ್ತಿ ಮರಳಿಸಿದ ನ್ಯಾಯಾಲಯ!
ಆಸ್ತಿ ವರ್ಗಾವಣೆ ಬಳಿಕ ಮಗಳಿಂದ ಕಡೆಗಣಿನೆ: ತಾಯಿಗೆ ಆಸ್ತಿ ಮರಳಿಸಿದ ನ್ಯಾಯಾಲಯ!
ಪೋಷಕರನ್ನು ಕಡೆಗಣಿಸಿದ ವಾರೀಸುದಾರರಿಂದ ಆಸ್ತಿಯನ್ನು ಮರಳಿ ಕೊಡಿಸಿದ ಅಪರೂಪದ ಪ್ರಸಂಗ ಕೊಡಗಿನಲ್ಲಿ ನಡೆದಿದೆ.
ಮಗಳು ತಮ್ಮ ವೃದ್ಧ ಪೋಷಕರನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಮಗಳಿಗೆ ವರ್ಗಾವಣೆಯಾಗಿದ್ದ ಆಸ್ತಿಯನ್ನು ನ್ಯಾಯಾಲಯ ಪೋಷಕರಿಗೆ ವಾಪಾಸು ಕೊಡಿಸಿದೆ.
ಕೊಡಗು ಉಪ ವಿಭಾಗಾಧಿಕಾರಿ ನ್ಯಾಯಾಲಯ (ಎಸಿ ಕೋರ್ಟ್) ಈ ಆದೇಶ ಹೊರಡಿಸಿದ್ದು, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಆದೇಶಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಆದೇಶ ಪೋಷಕರನ್ನು ಕಡೆಗಣಿಸುವ ಮಕ್ಕಳಿಗೆ ಪಾಠ ಕಲಿಸಿದಂತಾಗಿದೆ.
ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ -2007 ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಖುದ್ದು ನಿಂತು ಈ ಆಸ್ತಿಯನ್ನು ವಾಪಾಸ್ ಕೊಡಿಸಿದ್ದಾರೆ.
ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ 15 ಸೆಂಟ್ ಜಾಗವನ್ನು ಅದರ ಮಾಲಕರಾದ ಬಿ.ಎಸ್. ಜಾನಕಿ ಅವರು ದಾನಪತ್ರದ ಮೂಲಕ ಮಗಳಿಗೆ ವರ್ಗಾಯಿಸಿದ್ದರು. ಆಸ್ತಿ ವರ್ಗಾವಣೆಗೊಂಡ ಬಳಿಕ ಎರಡನೇ ಮಗಳು ಜಯಲಕ್ಷ್ಮಿ ತಾಯಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು.
ಈ ಬಗ್ಗೆ ಜಾನಕಿಯವರು ಉಪ ವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದು, ಮಗಳಿಂದ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯ ಮಗಳ ವಿರುದ್ಧ ಈ ಕ್ರಮ ಕೈಗೊಂಡಿದೆ.