ತಂದೆಯ ಸಾಲಕ್ಕೆ ನೀಡಿದ ಚೆಕ್: ಮರುಪಾವತಿಗೆ ಮಗ ಹೊಣೆಗಾರ- ಕರ್ನಾಟಕ ಹೈಕೋರ್ಟ್ (2-01-2023)
ತಂದೆಯ ಸಾಲಕ್ಕೆ ನೀಡಿದ ಚೆಕ್: ಮರುಪಾವತಿಗೆ ಮಗ ಹೊಣೆಗಾರ- ಕರ್ನಾಟಕ ಹೈಕೋರ್ಟ್ (2-01-2023)
ಮೃತಪಟ್ಟ ತಂದೆಯ ಸಾಲವನ್ನು ತೀರಿಸುವ ಹೊಣೆ ಹೊತ್ತುಕೊಂಡು ಮಗ ನೀಡಿದ ಚೆಕ್ ಅಮಾನ್ಯಗೊಂಡರೆ ಆತ ಆ ಸಾಲ ಮರುಪಾವತಿಸಲು ಹೊಣೆಗಾರನಾಗುತ್ತಾನೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೃತ ತಂದೆಯ ಸಾಲಕ್ಕೆ ಮಗ ಹೊಣೆಗಾರನಲ್ಲ ಎಂಬ ದಾವಣಗೆರೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಕೆ. ನಟರಾಜನ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣ: ಪ್ರಸಾದ್ ರಾಯ್ಕರ್ Vs ಬಿ.ಟಿ. ದಿನೇಶ್
ಕರ್ನಾಟಕ ಹೈಕೋರ್ಟ್ Crl A 725/2011 Dated 2-01-2023
ಪ್ರಕರಣದ ವಿವರ:
ಆರೋಪಿ ಬಿ.ಟಿ. ದಿನೇಶ್ ತಂದೆ ಭರಮಪ್ಪ ದೂರುದಾರರಿಂದ 2003ರಲ್ಲಿ 2.60 ಲಕ್ಷ ರೂಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ಈ ಸಾಲಕ್ಕೆ ಪ್ರತಿ ತಿಂಗಳು ಶೇಕಡಾ 2ರಷ್ಟು ಬಡ್ಡಿಯನ್ನು ನೀಡಲು ಒಪ್ಪಿಕೊಂಡು ದೂರುದಾರರ ಪರವಾಗಿ ಡಿಮ್ಯಾಂಡ್ ಪ್ರಾಮಿಸರಿ ನೋಟ್‌ಗೆ ಸಹಿ ಹಾಕಿದ್ದರು.
ಈ ಮಧ್ಯೆ, ಭರಮಪ್ಪ ಮೃತರಾದರು. ಸಾವಿನ ನಂತರ ಭರಮಪ್ಪ ಅವರ ಸಾಲವನ್ನು ತೀರಿಸುವಂತೆ ಮಗನಾದ ಬಿ.ಟಿ. ದಿನೇಶ್ ಅವರನ್ನು ದೂರುದಾರರ ಪ್ರಸಾದ್ ರಾಯ್ಕರ್ ಕೇಳಿಕೊಂಡರು. ಮಗ ತಂದೆಯ ಸಾಲಕ್ಕೆ 10,000/- ನಗದು ನೀಡಿ ಉಳಿದ ಮೊತ್ತಕ್ಕೆ ಎರಡು ಚೆಕ್ ನೀಡಿದ್ದರು. ಅದು ಅಮಾನ್ಯಗೊಂಡಿತ್ತು.
ದಾವಣಗೆರೆಯ ವಿಚಾರಣಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ದೂರುದಾರರು 14 ದಾಖಲೆಗಳನ್ನು ಹಾಜರುಪಡಿಸಿ ಪಿಡಬ್ಯೂ 1 ಆಗಿ ಸ್ವತಃ ಸಾಕ್ಷಿ ನುಡಿದರು. ಆರೋಪಿಯು 313 ಹೇಳಿಕೆ ನೀಡಿದ್ದು, ಡಿಫೆನ್ಸ್ ಸಾಕ್ಷ್ಯ ಮಾಡಲಿಲ್ಲ.
ಈ ಎಲ್ಲ ಸಾಕ್ಷ್ಯ ಮತ್ತು ಸಾಕ್ಷಿ ಪರ ಪ್ರಮಾಣೀಕೃತ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಸೆಷನ್ಸ್ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಆರೋಪಿಯನ್ನು ಖುಲಾಸೆಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಆರೋಪಿಯ ವಾದವೇನು..?
ಆರೋಪಿ ತಂದೆ ಮಾಡಿರುವ ಸಾಲಕ್ಕೆ ಚೆಕ್ ನೀಡಿದ್ದು, ಇದು ಕಾನೂನುರೀತ್ಯಾ ಮರುಪಾವತಿ ಮಾಡಬೇಕಾದ ಸಾಲವಲ್ಲ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಅದೇ ರೀತಿ, ಈ ಸಾಲವು ಅವಧಿ ಮೀರಿದ ಸಾಲವಾಗಿದ್ದು, ಅದು ಮರುಪಾವತಿಸಬೇಕಾದ ಕಾನೂನುಬದ್ಧ ಮಾನ್ಯತೆಯನ್ನು ಹೊಂದಿಲ್ಲ. ಹಾಗಾಗಿ ಚೆಕ್ ಅಮಾನ್ಯ ಪ್ರಕರಣ ಅನೂರ್ಜಿತಗೊಳಿಸಬೇಕು ಎಂದು ವಾದಿಸಲಾಗಿತ್ತು.
ದೂರುದಾರರ ವಾದವೇನು..?
ಚೆಕ್ ಅಮಾನ್ಯ ಪ್ರಕರಣದ ಆರೋಪಿಯವರ ತಂದೆ ಭರಮಪ್ಪ ಅವರು ದೂರು ಸಲ್ಲಿಸುವುದಕ್ಕೂ ಮುನ್ನ ದೂರುದಾರರಿಂದ ಪಡೆದ ಸಾಲದ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ದೂರುದಾರರು ಆರೋಪಿಯನ್ನು ಸಂಧಿಸಿ ಸಾಲ ಮರುಪಾವತಿಗೆ ಕೇಳಿದ್ದಾರೆ. ಭಾಗಶಃ ಮೊತ್ತವನ್ನು ಪಾವತಿಸಿರುವ ಆರೋಪಿ ತಂದೆಯ ಸಾಲಕ್ಕೆ ಎರಡು ಚೆಕ್ ನೀಡಿದ್ದರು.
ನ್ಯಾಯಪೀಠ ನೀಡಿದ ತೀರ್ಪೇನು..?
ICDS Ltd Vs Beena Shabeer And Anr (2002) 6 SCC 426 ಪ್ರಕರಣದಲ್ಲಿ ಸುಪ್ರೀಮ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಎನ್‌ಐ ಕಾಯ್ದೆಯ ಸೆಕ್ಷನ್ 29ರ ಪ್ರಕಾರ ಉತ್ತರಾಧಿ ಕಾರಿಗಳು ನೀಡಿದ ಚೆಕ್ ಸಾಲ ಮರುಪಾವತಿಯ ಬಾಧ್ಯತೆ ಹೊಂದಿದೆ. ICDS ತೀರ್ಪನ್ನು ಗಮನದಲ್ಲಿಟ್ಟುಕೊಂಡು, ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಪುನರ್‌ಸ್ಥಾಪಿಸುವಂತೆ ಆದೇಶ ಹೊರಡಿಸಿತು. ತಂದೆಯ ಕಾನೂನುಬದ್ಧ ವಾರಸುದಾರ ಆಗಿರುವ ಪುತ್ರ ತಂದೆಯ ಸಾಲವನ್ನು ಮರುಪಾವತಿಸಲು ಹೊಣೆಗಾರನಾಗಿದ್ದಾನೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿತು.
ಪ್ರಕರಣ: ಪ್ರಸಾದ್ ರಾಯ್ಕರ್ Vs ಬಿ.ಟಿ. ದಿನೇಶ್
ಕರ್ನಾಟಕ ಹೈಕೋರ್ಟ್ Crl A 725/2011 Dated 2-01-2023