ವೈದ್ಯ ಲೋಕದ ಮಾದಕ ಮಾಫಿಯಾ: ಸಮಗ್ರ ತನಿಖೆಯಲ್ಲಿ ಎಡವಿದ ಪೊಲೀಸ್ ಇಲಾಖೆ- ಹಿರಿಯ ವೈದ್ಯರು, ವಕೀಲರ ಆರೋಪ
ವೈದ್ಯ ಲೋಕದ ಮಾದಕ ಮಾಫಿಯಾ: ಸಮಗ್ರ ತನಿಖೆಯಲ್ಲಿ ಎಡವಿದ ಪೊಲೀಸ್ ಇಲಾಖೆ- ಹಿರಿಯ ವೈದ್ಯರು, ವಕೀಲರ ಆರೋಪ
ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕೆಲವು ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಬೃಹತ್ ಮಾದಕ ಜಾಲದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಮರ್ಪಕ ತನಿಖೆ ನಡೆಸುವಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದಾರೆ ಎಂದು ಹಿರಿಯ ಫಾರೆನ್ಸಿಕ್ಸ್ ತಜ್ಞ ಡಾ. ಮಹಾಬಲೇಶ್ವರ್ ಶೆಟ್ಟಿ ಮತ್ತು ಹಿರಿಯ ವಕೀಲರೂ, ಮಾಜಿ ಸರ್ಕಾರಿ ವಕೀಲರೂ(Ex- Government Pleader) ಆಗಿರುವ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಎನ್. ಮನೋರಾಜ್ ರಾಜೀವ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಬೃಹತ್ ಮಾದಕ ಮಾಫಿಯಾದಿಂದ ಬ್ರ್ಯಾಂಡ್ ಮಂಗಳೂರಿಗೆ ಧಕ್ಕೆ ಆಗಿದೆ. ಇದರ ಬುಡಸಮೇತ ಮಟ್ಟ ಹಾಕಲು ಪೊಲೀಸ್ ಇಲಾಖೆ ಕಟಿಬದ್ಧರಾಗಿರಬೇಕಿತ್ತು. ಆದರೆ, ಪೊಲೀಸ್ ಆಯುಕ್ತರು ಕೇವಲ ಕಣ್ಣೊರೆಸುವ ತನಿಖೆ ನಡೆಸಿ ಉಳ್ಳವರ ಪರವಾದ ನಿಲುವು ಪ್ರಕಟಿಸಿದ್ದಾರೆ ಎಂದು ದೂರಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ ನಡೆಸಬೇಕು. ಈ ಬೇಡಿಕೆಯನ್ನು ಮುಂದಿಟ್ಟು ತಾವು ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸುವುದಾಗಿ ಡಾ. ಮಹಾಬಲೇಶ್ವರ್ ಶೆಟ್ಟಿ ಮತ್ತು ಮನೋರಾಜ್ ರಾಜೀವ ಪ್ರಕಟಿಸಿದರು.
ಪೊಲೀಸ್ ತನಿಖೆಯು ಕಳಪೆ ಹಾಗೂ ಅವೈಜ್ಞಾನಿಕವಾಗಿದೆ. ಅಷ್ಟೇ ಅಲ್ಲ ಕಾನೂನುಬದ್ಧವಾಗಿ ಆಧಾರರಹಿತವಾಗಿದೆ. ತನಿಖೆ ಸಮರ್ಪಕವಾಗಿ ಸಮಗ್ರವಾಗಿ ನಡೆದಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ವಿರುದ್ಧ ಆರೋಪ ಮಾಡಿದ ಅವರು, ಸಿಬಿಐನಂತಹ ಕೇಂದ್ರೀ ಸಂಸ್ಥೆಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಗಾಂಜಾ ಸೇವಿಸಿದವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಅವಕಾಶ ಇದೆ. ಅದನ್ನು ಬಿಟ್ಟು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಕ್ರಮ ಸರಿಯಲ್ಲ ಎಂದು ಫೋರೆನ್ಸಿಕ್ ತಜ್ಞ ಡಾ. ಮಹಾಬಲೇಶ್ ಶೆಟ್ಟಿ ಅಭಿಪ್ರಾಯಪಟ್ಟರು.