ಒಂದು ರೂ. ಚಿಲ್ಲರೆ ಪ್ರಕರಣ: ಗ್ರಾಹಕರ ಹಕ್ಕು ಎತ್ತಿಹಿಡಿದ ಗ್ರಾಹಕ ನ್ಯಾಯಾಲಯ: ಸಾವಿರಗಟ್ಟಲೆ ದಂಡ!
ಒಂದು ರೂ. ಚಿಲ್ಲರೆ ಪ್ರಕರಣ: ಗ್ರಾಹಕರ ಹಕ್ಕು ಎತ್ತಿಹಿಡಿದ ಗ್ರಾಹಕ ನ್ಯಾಯಾಲಯ: ಚಿಲ್ಲರೆ ನೀಡದ ಕಂಡೆಕ್ಟರ್‌ಗೆ ಸಾವಿರಗಟ್ಟಲೆ ದಂಡ!
ಬಸ್ಸಿನ ಪ್ರಯಾಣಿಕನಿಗೆ ಕೇವಲ ಒಂದು ರೂಪಾಯಿ ಚಿಲ್ಲರೆ ನೀಡದ ಕಂಡಕ್ಟರ್‌ಗೆ ಗ್ರಾಹಕ ನ್ಯಾಯಾಲಯ ಸಾವಿರಗಟ್ಟಲೆ ದಂಡ ವಿಧಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಬಸ್ ನಿರ್ವಾಹಕನ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ಸಂತ್ರಸ್ತ ಪ್ರಯಾಣಿಕನಿಗೆ ಮೂರು ಸಾವಿರ ರೂಪಾಯಿ ಪರಿಹಾರ ಕೊಡುವಂತೆ ಆದೇಶ ನೀಡಿದೆ.
BMTC ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಕಂಡಕ್ಟರ್ ತನಗೆ 1 ರೂಪಾಯಿ ಚಿಲ್ಲರೆ ನೀಡಲಿಲ್ಲ ಎಂದು ವಕೀಲ ರಮೇಶ್ ನಾಯಕ್ ಗ್ರಾಹಕ ಕೋರ್ಟ್ ಗೆ ದೂರು ಸಲ್ಲಿಸಿದ್ದರು. ಈ ದೂರಿನ್ನು ವಿಚಾರಣೆಗೆ ಕೈಗೆತ್ತಿಕೊಂಡ ಬೆಂಗಳೂರಿನ 4ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ದೂರುದಾರರಿಗೆ ತೊಂದರೆಯಾಗಿದ್ದಕ್ಕೆ 2 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಜೊತೆಗೆ ಕೇಸಿನ ವೆಚ್ಚವಾಗಿ ದೂರುದಾರರಿಗೆ ಒಂದು ಸಾವಿರ ರೂ. ಪಾವರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ತೀರ್ಪಿನ ದಿನದಿಂದ 45 ದಿನಗಳಲ್ಲಿ ದಂಡದ ಮೊತ್ತವನ್ನು ನೀಡದಿದ್ದರೆ ವಾರ್ಷಿಕ ಶೇಕಡಾ 6 ರಂತೆ ಬಡ್ಡಿ ಸೇರಿಸಿ ಕೊಡಬೇಕು ಎಂದು ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ
2019 ಸಪ್ಟೆಂಬರ್ ತಿಂಗಳಿನಲ್ಲಿ ವಕೀಲ ರಮೇಶ್ ನಾಯಕ್ ಎಂಬವರು BMTC ವೋಲ್ವೊ ಬಸ್ಸಿನಲ್ಲಿ ಬೆಂಗಳೂರಿನ ಶಾಂತಿ ನಗರದಿಂದ ಮೆಜೆಸ್ಟಿಕ್ ಕಡೆಗೆ ಪ್ರಯಾಣ ಮಾಡಿದ್ದರು. ಆ ಸಂದರ್ಭದಲ್ಲಿ ರೂ. 29 ಟಿಕೆಟ್ ನೀಡಿ ನಿರ್ವಾಹಕರು ರೂ. 30 ಪಡೆದುಕೊಂಡಿದ್ದರು. ಆದರೆ, ಚಿಲ್ಲರೆ ಒಂದು ರೂಪಾಯಿ ವಾಪಸ್ ನೀಡಿರಲಿಲ್ಲ.
ಬಸ್ ನಿರ್ವಾಹಕರ ಚಿಲ್ಲರೆ ನೀಡದೆ ಗ್ರಾಹಕ ವಿರೋಧಿ ಕ್ರಮವನ್ನು ಪ್ರಶ್ನಿಸಿ ರಮೇಶ್ ಬೆಂಗಳೂರಿನ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು ಹಾಗೂ 15 ಸಾವಿರ ಪರಿಹಾರ ಕೋರಿದ್ದರು.
ಗ್ರಾಹಕರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ BMTC ಈ ಪ್ರಕರಣವನ್ನು ಒಂದು ಚಿಲ್ಲರೆ ಯಾ ಕ್ಷುಲ್ಲಕ ಪ್ರಕರಣ ಎಂದು ಪರಿಗಣಿಸಿ ವಜಾ ಮಾಡಬೇಕು ಎಂದು ವಾದಿಸಿದ್ದತು.
ಆದರೆ, ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಇದೊಂದು ಕ್ಷುಲ್ಲಕ ಪ್ರಕರಣ ಎನ್ನಿಸಬಹುದು. ಆದರೆ ಇದು ಗ್ರಾಹಕರ ಹಕ್ಕಿನ ವಿಷಯ. ದೂರು ಸಲ್ಲಿಸಿದ ಅರ್ಜಿದಾರರ ಪ್ರಯತ್ನ ಶ್ಲಾಘನೀಯ. ಪ್ರಕರಣದಲ್ಲಿ ದೂರುದಾರರು ಪರಿಹಾರಕ್ಕೆ ಅರ್ಹರು ಎಂದು ಹೇಳಿ ಪರಿಹಾರಕ್ಕೆ ಆದೇಶಿಸಿದೆ.