ಕೋರ್ಟ್‌ನಲ್ಲಿ ದುರಹಂಕಾರದ ವರ್ತನೆ: ವಕೀಲರನ್ನು ಜೈಲಿಗೆ ಕಳುಹಿಸಿದ ಕರ್ನಾಟಕ ಹೈಕೋರ್ಟ್!
ಕೋರ್ಟ್‌ನಲ್ಲಿ ದುರಹಂಕಾರದ ವರ್ತನೆ: ವಕೀಲರನ್ನು ಜೈಲಿಗೆ ಕಳುಹಿಸಿದ ಕರ್ನಾಟಕ ಹೈಕೋರ್ಟ್!
ನಾಲ್ವರು ಹಾಲಿ ನ್ಯಾಯಾಧೀಶರ ವಿರುದ್ಧ ಆಧಾರ ರಹಿತ ಆರೋಪ ಮಾಡಿದ ವಕೀಲರನ್ನು ಒಂದು ವಾರಗಳ ಕಾಲ ಜೈಲಿಗೆ ಕಳುಹಿಸುವ ಮೂಲಕ ಕರ್ನಾಟಕದ ಹೈಕೋರ್ಟ್ ವಕೀಲರ ದುರಹಂಕಾರದ ವರ್ತನೆ ವಿರುದ್ಧ ಸ್ಪಷ್ಟ ಸಂದೇಶ ಸಾರಿದೆ.
ನಾಲ್ವರು ಹಾಲಿ ನ್ಯಾಯಾಧೀಶರ ವಿರುದ್ಧ ಆರೋಪ ಮಾಡಿದ ಪ್ರಕರಣದಲ್ಲಿ ವಕೀಲರಾದ ಕೆ.ಎಸ್. ಅನಿಲ್ ವಿರುದ್ಧ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸ್ನನ್ನ ಬಿ. ವರಾಳೆ ಮತ್ತು ನ್ಯಾ. ಅಶೋಕ್ ಎಸ್. ಕಿಣಗಿ ಅವರ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
2019ರಲ್ಲಿ ಹೈಕೋರ್ಟ್ ಆರಂಭಿಸಿದ ಕ್ರಿಮಿನಲ್ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಕಲಾಪ ಪ್ರಕ್ರಿಯೆಯಲ್ಲಿ ಮೌಖಿಕ ಯಾ ಲಿಖಿತ ಅರ್ಜಿ ಸಲ್ಲಿಸಲು ಸ್ವಲ್ಪ ಸಮಯ ಅಗತ್ಯವಿದೆಯೇ..? ಎಂದು ವಕೀಲರನ್ನು ಕೇಳಿತು. ಆದರೆ, ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ, ನ್ಯಾಯಾಲಯದ ಪ್ರಶ್ನೆಯನ್ನು ತಪ್ಪಿಸಿ ಸದ್ರಿ ವಕೀಲರು ದುರಂಹಕಾರದಿಂದ ವರ್ತಿಸಲು ಆರಂಭಿಸಿದರು ಎಂಬುದನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಈ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಆರೋಪ ಮಾಡುವ ಮೂಲಕ ಆರೋಪಿಯು ತನಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವವಿಲ್ಲ ಎಂಬುದನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ ಎಂದು ನ್ಯಾಯಪೀಠ ಗಮನಿಸಿತು.
ವೃತ್ತಿಪರ ವಕೀಲರಾಗಿ ಆರೋಪಿಯು ಈ ಹಿಂದೆ ಹಲವು ಸಂದರ್ಭಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಹಾಗೂ ನಿರ್ದಿಷ್ಟವಾಗಿ ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಆಧಾರರಹಿತ ಹಾಗೂ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಜೊತೆಗೆ ನ್ಯಾಯಾಂಗದಂತಹ ಗೌರವಾನ್ವಿತ ಸಂಸ್ಥೆಯನ್ನು ಅವಮಾನಿಸಲು ಪ್ರಯತ್ನಿಸಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಹಾಗಾಗಿ, ನ್ಯಾಯಾಂಗ ನಿಂದನೆ ಎಸಗಿರುವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆದೇಶವನ್ನು ಹೊರಡಿಸುವುದನ್ನು ಬಿಟ್ಟು ಬೇರೆ ಅನ್ಯ ಮಾರ್ಗ ಇಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ವಿಷಾದ ವ್ಯಕ್ತಪಡಿಸಿದೆ.
ಮುಂದಿನ ವಿಚಾರಣೆ ವೇಳೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಹೈಕೋರ್ಟ್ ಹೇಳಿದೆ.
2019ರಲ್ಲಿ ವಕೀಲರಾಧ ಅನಿಲ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗಿತ್ತು. ಹೈಕೋರ್ಟ್‌ನ ಹಾಲಿ ನಾಲ್ವರು ನ್ಯಾಯಾಧೀಶರ ವಿರುದ್ಧ ಮಾಡಿದ ಆರೋಪಗಳು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ಎಂದು ಹೇಳಲಾಗಿತ್ತು.
ನ್ಯಾಯಾಧೀಶರ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನು ಬೇಷರತ್ತಾಗಿ ಹಿಂಪಡೆಯಲು ಹಾಗೂ ಬೇಷರತ್ ಕ್ಷಮೆಯಾಚಿಸಲು ಆರೋಪಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲ. ಹಾಗಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.