Birth & Death Declaration Case- 'ದತ್ತಕ' ಸಾಬೀತುಪಡಿಸಲು ನೋಂದಾಯಿತ ದತ್ತಕ ಪತ್ರ ಸಾಕು, ಕೋರ್ಟ್ ತೀರ್ಪು ಅನಗತ್ಯ: ಗುಜರಾತ್ ಹೈಕೋರ್ಟ್
'ದತ್ತಕ' ಸಾಬೀತುಪಡಿಸಲು ನೋಂದಾಯಿತ ದತ್ತಕ ಪತ್ರ ಸಾಕು, ಕೋರ್ಟ್ ತೀರ್ಪು ಅನಗತ್ಯ: ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ
ಯಾವುದೇ ಒಂದು ಮಗುವನ್ನು ದತ್ತು ಪಡೆದಿರುವುದನ್ನು ಸಾಬೀತುಪಡಿಸಲು ಕೋರ್ಟ್‌ನ ಡಿಕ್ಲರೇಷನ್ ಆದೇಶ ಅನಗತ್ಯ. ಕೇವಲ ಮಗು ದತ್ತು ಪಡೆದಿರುವ ನೋಂದಾಯಿತ ದತ್ತಕ ಪತ್ರ ಸಾಕು ಎಂದು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ
ಮಗುವನ್ನು ದತ್ತು ಪಡೆದಿರುವ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿದೆಯೇ ಮತ್ತು ದತ್ತು ಪ್ರಕ್ರಿಯೆಯಲ್ಲಿ ಸರಿಯಾದ ಕಾರ್ಯವಿಧಾನ ಪಾಲಿಸಲಾಗಿದೆಯೇ ಎಂಬುದನ್ನು ಸಿವಿಲ್ ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂಬ ಬಾಂಬೆ ಹೈಕೋರ್ಟ್ ತೀರ್ಪಿಗೆ ನ್ಯಾ. ಬಿರೇನ್ ವೈಷ್ಣವ್ ಅವರ ಏಕಸದಸ್ಯ ಪೀಠ ಒಪ್ಪಲಿಲ್ಲ.
ಮಗುವಿನ ಜನನ ಪ್ರಮಾಣಪತ್ರದಿಂದ ಜೈವಿಕ ತಂದೆಯ ಹೆಸರನ್ನು ಅಳಿಸಿ ಹಾಕುವುದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಹೇಳಲಾಗಿತ್ತು.
ಮಗುವಿನ ಜನನ ನೋಂದಣಿ ಪತ್ರದಲ್ಲಿ ಜೈವಿಕ ತಂದೆಯ ಹೆಸರು ಅಳಿಸಿ ದತ್ತು ತಂದೆಯ ಹೆಸರು ಸೇರಿಸಲು ನಿರಾಕರಿಸುವುದು ಆ ಮಗುವಿಗೆ ಭವಿಷ್ಯದ ಜೀವನದಲ್ಲಿ ವಿವಿಧ ಸಾರ್ವಜನಿಕ ಯಾ ಸಕ್ಷಮ ಪ್ರಾಧಿಕಾರಗಳ ಜೊತೆ ನಡೆಸುವ ವ್ಯವಹಾರಗಳಿಗೆ ಪ್ರ್ಯಾಕ್ಟಿಕಲ್ ಸಮಸ್ಯೆ ಉಂಟಾಗುತ್ತದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ ಕಲಂ 15ರ ಪ್ರಕಾರ ಅಧಿಕಾರ ಚಲಾಯಿಸದಿದ್ದರೆ ನೊಂದವರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿತು.
ಘಟನೆಯ ವಿವರ
ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಮಹಿಳೆಯೊಬ್ಬರು ಇನ್ನೊಬ್ಬರನ್ನು ಮರು ವಿವಾಹವಾಗಿದ್ದರು. ಎರಡನೇ ಮದುವೆ ಬಳಿಕ ತಮ್ಮ ಮೊದಲ ಪತಿಯಿಂದ ಪಡೆದ ಮಗುವಿನ ಪಾಲನೆಯನ್ನೂ ಅವರು ಮಾಡುತ್ತಿದ್ದರು. ಆಕೆಯ ಎರಡನೇ ಪತಿ ಮತ್ತು ಆಕೆ ಅದೇ ಮಗುವನ್ನು ದತ್ತು ಪಡೆದಿದ್ದರು. ಬಳಿಕ ಮಗುವಿನ ಜನನ ಪ್ರಮಾಣಪತ್ರದಲ್ಲಿ ನಮೂದಿಸಲಾದ ಜೈವಿಕ ತಂದೆಯ ಹೆಸರಿನ ಬದಲಿಗೆ ಎರಡನೇ ಪತಿಯ ಹೆಸರನ್ನು ಸೇರಿಸಲು ಜನನ ಮರಣ ನೋಂದಣಾಧಿಕಾರಿಗಳನ್ನು ಕೋರಿಕೊಂಡಿದ್ದರು.
ಆದರೆ, ಹೆಸರು ಬದಲಾವಣೆ ಅರ್ಜಿಯ ಜೊತೆಗೆ ಕೋರ್ಟ್ ಆದೇಶ ಇಲ್ಲ ಎಂಬ ಕಾರಣಕ್ಕೆ ಜನನ ಮರಣ ನೋಂದಣಾಧಿಕಾರಿಗಳು ಈ ಮನವಿಯನ್ನು ತಿರಸ್ಕರಿಸಿದ್ದರು.
ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆ- 1956ರ ಸೆಕ್ಷನ್ 16ರ ಪ್ರಕಾರ, ಯಾವುದೇ ದತ್ತು ಪತ್ರವನ್ನು ನೋಂದಾಯಿಸಿದಾಗ, ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತಂತೆ ಪೂರ್ವಸೂಚನೆ ಹೊಂದಿದ್ದು ಅದನ್ನು ನಿರಾಕರಿಸದೇ ಇದ್ದಾಗ ಅದು ದತ್ತು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿದೆ ಎಂದು ಭಾವಿಸತಕ್ಕದ್ದು ಎಂಬುದಾಗಿ ಗುಜರಾತ್ ಹೈಕೋರ್ಟ್‌ನ ನೀಡಿದ್ದ ಹಿಂದಿನ ತೀರ್ಪನ್ನು ನ್ಯಾಯಪೀಠ ತನ್ನ ಈ ತೀರ್ಪಿನಲ್ಲಿ ವಿವರಿಸಿದೆ.
ದತ್ತು ಪ್ರಕ್ರಿಯೆ ವಿಧಿವತ್ತಾಗಿ ನಡೆದಿದ್ದು, ಜೈವಿಕ ತಂದೆಯಿಂದ ಯಾವ ಆಕ್ಷೇಪಣೆಗಳೂ ಬರದೇ ಇರುವ ಕಾರಣ ಪೂರ್ವಸೂಚನೆಯನ್ನು ನಿರಾಕರಿಸಬಹುದು. ಆದರೂ ಈ ಪ್ರಕ್ರಿಯೆಗೆ ತಡೆ ಅಥವಾ ಆಕ್ಷೇಪ ಉಂಟು ಮಾಡುವ ಪ್ರಯತ್ನ ನಡೆದಿಲ್ಲ ಎಂಬುದನ್ನು ಪರಿಗಣಿಸಬೇಕಾಗುತ್ತದೆ ಎಂದಿರುವ ನ್ಯಾಯಪೀಠ, ಸಕ್ಷಮ ಪ್ರಾಧಿಕಾರ ಮುಂದೆ ದತ್ತು ಪತ್ರವನ್ನು ಸಲ್ಲಿಸಿರುವಾಗ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಸಲ್ಲಿಸುವಂತೆ ಪಕ್ಷಕಾರರನ್ನು ಹಿಂದಕ್ಕೆ ಕಳಿಸುವಂತಹ ಅಧಿಕಾರ ನೋಂದಣಾಧಿಕಾರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಅಧಿಕಾರಿಗಳ ಆದೇಶ ರದ್ದುಪಡಿಸಿ ಅರ್ಜಿದಾರರು ಕೋರಿರುವ ಹೆಸರನ್ನು ಅಳಿಸಿ ಹೊಸ ಪರ್ಯಾಯ ಹೆಸರನ್ನು ಸೇರಿಸಬೇಕು ಎಂದು ಆದೇಶಿಸಿದೆ.
ಪ್ರಕರಣ: ಖೋಜೆಮಾ ಸೈಫುದಿನ್ ದೋಡಿಯಾ Vs ಜನನ ಮರಣ ನೋಂದಣಾಧಿಕಾರಿ
ಗುಜರಾತ್ ಹೈಕೋರ್ಟ್