ಸುಪ್ರೀಂ ನ್ಯಾಯಪೀಠಕ್ಕೆ ಮತ್ತೊಬ್ಬ ಕನ್ನಡಿಗ!- ಅರವಿಂದ ಕುಮಾರ್ ಸಹಿತ ಇಬ್ಬರ ಹೆಸರು ಶಿಫಾರಸ್ಸು
ಸುಪ್ರೀಂ ನ್ಯಾಯಪೀಠಕ್ಕೆ ಮತ್ತೊಬ್ಬ ಕನ್ನಡಿಗ!- ಅರವಿಂದ ಕುಮಾರ್ ಸಹಿತ ಇಬ್ಬರ ಹೆಸರು ಶಿಫಾರಸ್ಸು
ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿರುವ ಕನ್ನಡಿಗ ನ್ಯಾ. ಅರವಿಂದ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಲೀಜಿಯಂ ಶಿಫಾರಸ್ಸು ಮಾಡಿದೆ.
ಅರವಿಂದ ಕುಮಾರ್ ಜೊತೆಗೆ ಅಲಹಾಬಾದ್ ಹೈಕೋರ್ಟ್‌ನ ಸಿಜೆ ನ್ಯಾ. ರಾಜೇಶ್ ಬಿಂದಾಲ್ ಅವರ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ.
ದೇಶದ ವಿವಿಧ ಹೈಕೋರ್ಟ್‌ಗಳ ಸಿಜೆಗಳು ಮತ್ತು ಹಿರಿಯ ನ್ಯಾಯಮೂರ್ತಿಗಳ ಸೇವಾ ಹಿರಿತನಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಮಾಡಲಾಗಿದೆ. ದೇಶದ ಎಲ್ಲ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಒಟ್ಟಾರೆ ಹಿರಿತನ, ಅರ್ಹತೆ, ಕಾರ್ಯಕ್ಷಮತೆ ಮತ್ತು ದಕ್ಷತೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಇದೇ ವೇಳೆ, ಸುಪ್ರೀಂ ನ್ಯಾಯಪೀಠದಲ್ಲಿ ಸಮರ್ಪಕ ಪ್ರಾತಿನಿಧ್ಯ ಇಲ್ಲದ ಹೈಕೋರ್ಟ್‌ಗಳನ್ನು ಗಣನೆಗೆ ತೆಗೆದುಕೊಂಡು ಈ ಆಯ್ಕೆ ಮಾಡಲಾಗಿದೆ ಎಂದು ಕೊಲಿಜಿಯಂ ಹೇಳಿದೆ.
ಗುಜರಾತ್ ಹೈಕೋರ್ಟ್ ಸಿಜೆ ಆಗಿರುವ ನ್ಯಾ. ಅರವಿಂದ್ ಕುಮಾರ್ 2009ರ ಜೂನ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡವರು. 2012ರ ಡಿಸೆಂಬರ್ ನಲ್ಲಿ ಖಾಯಂ ನ್ಯಾಯಮೂರ್ತಿಯಾದರು. 2021ರ ಅಕ್ಟೋಬರ್ ನಲ್ಲಿ ಗುಜರಾತ್ ಹೈಕೋರ್ಟ್ ಸಿಜೆ ಆಗಿ ಅವರು ಪದೋನ್ನತಿ ಹೊಂದಿದರು.
ಇಡೀ ದೇಶದ ನ್ಯಾಯಾಂಗದ ಪೈಕಿ, ನ್ಯಾಯಮೂರ್ತಿ ಅರವಿಂದ್ ಕುಮಾರ್ ಸದ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ 26ನೇ ಅತಿ ಹಿರಿಯ ವ್ಯಕ್ತಿ. ಅದೇ ರೀತಿ, ಕರ್ನಾಟಕ ಹೈಕೋರ್ಟ್‌ನಿಂದ ಮೂಡಿ ಬಂದ ಜಸ್ಟಿಸ್‌ಗಳಲ್ಲಿ ಅರವಿಂದ್ ಎರಡನೇ ಅತಿ ಹಿರಿಯರು. ಸದ್ಯ ಸುಪ್ರೀಂ ನ್ಯಾಯಪೀಠದಲ್ಲಿ ಕರ್ನಾಟಕ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿ ಮಾತ್ರ ಇದ್ದಾರೆ ಎಂಬ ಕಾರಣಕ್ಕೆ ಕೊಲೀಜಿಯಂ ಜಸ್ಟಿಸ್ ಅರವಿಂದ್ ಕುಮಾರ್ ಹೆಸರನ್ನು ಸೂಚಿಸಿದೆ.
ನ್ಯಾ. ರಾಜೇಶ್ ಬಿಂದಾಲ್ ಹೆಸರು ಅವಿರೋಧವಾಗಿ ಕೊಲಿಜಿಯಂ ಪಾಸ್ ಮಾಡಿತು. ಆದರೆ, ನ್ಯಾ. ಅರವಿಂದ್ ಕುಮಾರ್ ಹೆಸರಿಗೆ ನ್ಯಾ. ಕೆ. ಎಂ. ಜೋಸೆಫ್ ಅಸಮ್ಮತಿ ಸೂಚಿಸಿದರು. ಮುಂದಿನ ಹಂತದಲ್ಲಿ ಈ ಶಿಫಾರಸ್ಸು ಪರಿಗಣಿಸಬಹುದು ಎಂಬುದು ಜೋಸೆಫ್ ಮುಂದಿಟ್ಟ ಕಾರಣ.