Consumer Awareness | ಕಾಯ್ದಿರಿಸಿದ ರೂಮ್ ನೀಡದೆ ಲಾಡ್ಜ್‌ನಿಂದ ಸೇವಾ ನ್ಯೂನ್ಯತೆ: ಗ್ರಾಹಕ ನ್ಯಾಯಾಲಯದಿಂದ ಭಾರೀ ಮೊತ್ತದ ಪರಿಹಾರ!
ಕಾಯ್ದಿರಿಸಿದ ರೂಮ್ ನೀಡದೆ ಲಾಡ್ಜ್‌ನಿಂದ ಸೇವಾ ನ್ಯೂನ್ಯತೆ: ಗ್ರಾಹಕ ನ್ಯಾಯಾಲಯದಿಂದ ಭಾರೀ ಮೊತ್ತದ ಪರಿಹಾರ!
ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ ಹೋಟೆಲ್ ರೂಂ ಅನ್ನು ಗ್ರಾಹಕನಿಗೆ ಒದಗಿಸದ ಸೇವಾದಾರರಿಗೆ ಗ್ರಾಹಕ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.
ಧಾರವಾಡ ನಗರದ 21 ಸ್ನೇಹಿತರಿಗೆ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದ ಕೊಠಡಿಗಳನ್ನು ಒದಗಿಸದ ತಪ್ಪಿಗೆ ಮೇಕ್ ಮೈ ಟ್ರಿಪ್, ಓಯೋ ಮತ್ತು ಹೋಟೆಲ್ ಮೇಲೆ ಬರೊಬ್ಬರಿ 11.38 ಲಕ್ಷ ರೂ ದಂಡ ವಿಧಿಸಿ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಗ್ರಾಹಕರು 2019ರ ಡಿಸೆಂಬರ್ ತಿಂಗಳಿನಲ್ಲಿ ಮಧ್ಯರಾತ್ರಿ ನಡುಗುವ ಚಳಿಯಲ್ಲಿ ರೂಂ ಸಿಗದ ಕಾರಣ ತಾವು ಆಗಮಿಸಿದ್ದ ವಾಹನದಲ್ಲೇ ರಾತ್ರಿ ಕಳೆಯುವಂತಾಗಿತ್ತು. ಹೋಟೆಲ್ ಆಡಳಿತದ ಈ ದಾರ್ಷ್ಟ್ಯಕ್ಕೆ ಆಯೋಗ ಬಿಸಿ ಮುಟ್ಟಿಸಿದೆ.
ಘಟನೆಯ ವಿವರ
ಹುಬ್ಬಳ್ಳಿಯ ವಿದ್ಯಾನಗರ ನಿವಾಸಿ ದೀಪಕ್ ರತನ್, ಅವರ ಸ್ನೇಹಿತರು 21 ಮಂದಿ 2019ರ ಡಿಸೆಂಬರ್‌ನಲ್ಲಿ ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ಆನ್‌ಲೈನ್ ಮುಂಗಡ ಬುಕ್ಕಿಂಗ್ ಮಾಡಿ ಮಹಾರಾಷ್ಟ್ರದ ಮುಂಬೈ, ಲೋನಾವಾಲಾ, ಲಾವಾಸಾ ಮತ್ತು ಇತರೆ ಕಡೆ ಪ್ರವಾಸಕ್ಕೆ ಹೋಗಿದ್ದರು.
23-12-2019ರಿಂದ 25-12-2019ರ ಎರಡು ದಿವಸಕ್ಕೆ ಅವರು ಲಾವಾಸಾದ ಹೋಟೆಲ್ ಅನಂತ ರೆಸಿಡೆನ್ಸಿಯಲ್ಲಿ ರೂ. 17,752 ಗಳನ್ನು ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ಹಣ ಸಂದಾಯ ಮಾಡಿ ತಮ್ಮ ವಾಸ್ತವ್ಯಕ್ಕೆ ಒಟ್ಟು 8 ಕೋಣೆಗಳನ್ನು ಕಾಯ್ದಿರಿಸಿದ್ದರು.
ಆ ಪ್ರಕಾರ, 21 ಮಂದಿ ಗ್ರಾಹಕರು (ದೂರುದಾರರು) 23-12-2019ರಂದು ಲಾವಾಸಾಕ್ಕೆ ಬಂದು ತಮ್ಮ ವಾಸ್ತವ್ಯಕ್ಕೆ ಹೋಟೆಲ್ ಅನಂತ ರೆಸಿಡೆನ್ಸಿಯಲ್ಲಿ ವಿಚಾರಿಸಿದಾಗ ಅದರ ಮ್ಯಾನೇಜರ್ ರೂಮುಗಳು ಖಾಲಿ ಇಲ್ಲ ಎಂದು ಹೇಳಿ ತಾವು ಕಾಯ್ದಿರಿಸಿದ ಕೋಣೆ ಒದಗಿಸಲು ನಿರಾಕರಿಸಿದ್ದರು.
ಆ ದಿನ ರಾತ್ರಿ ಅನಿವಾರ್ಯವಾಗಿ 5 ಜನ ಹೆಣ್ಣು ಮಕ್ಕಳು, 11 ಜನ ಚಿಕ್ಕ ಮಕ್ಕಳನ್ನು ಸೇರಿ ಎಲ್ಲ 21 ಜನ ದೂರುದಾರರು ಹೋಟೆಲ್ ಆವರಣದಲ್ಲಿ ತಾವು ಆಗಮಿಸಿದ್ದ ವಾಹನದಲ್ಲೇ ರಾತ್ರಿ ಕಳೆದರು.
ಮರುದಿನ ಅವರೆಲ್ಲರೂ ಆ ಪ್ರದೇಶದ ಇನ್ನೊಂದು ಹೊಟೇಲ್‌ಗೆ ತೆರಳಿ ಅಲ್ಲಿ ರೂ. 37,628 /- ಹಣ ಪಾವತಿ ಮಾಡಿ ಬೇರೆ ರೂಮುಗಳನ್ನು ಪಡೆದುಕೊಂಡರು.
ತಮ್ಮಿಂದ ಮುಂಗಡ ಹಣ ಪಡೆದು ಅನಂತ ರೆಸಿಡೆನ್ಸಿ ಹೋಟೆಲ್ ನಲ್ಲಿ ತಾವು ಕಾಯ್ದಿರಿಸಿದ 8 ರೂಮುಗಳನ್ನು ತಮಗೆ ಒದಗಿಸದೆ ಇಡೀ ರಾತ್ರಿ ಡಿಸೆಂಬರ್ ಚಳಿಯಲ್ಲಿ ವಾಹನದಲ್ಲೇ ಕಳೆಯುವಂತೆ ಮಾಡಿ ಗ್ರಾಹಕರಿಗೆ ಅನನುಕೂಲ ಮತ್ತು ತೊಂದರೆ ಮಾಡಿದರು. ಅಲ್ಲದೆ, ಹೋಟೆಲ್ ಆಡಳಿತ ತಮಗೆ ವಂಚನೆ ಮತ್ತು ಸೇವಾ ನ್ಯೂನ್ಯತೆ ಮಾಡಿದ್ದು, ಈ ಬಗ್ಗೆ ಮೇಕ್ ಮೈ ಟ್ರಿಪ್, ಓಯೋ ಕಂಪನಿ ಹಾಗೂ ಅನಂತ ರೆಸಿಡೆನ್ಸಿ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಒಟ್ಟು 5 ದೂರುಗಳನ್ನು ಸಲ್ಲಿಸಿದ್ದರು.
ಈ ದೂರನ್ನು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿ. ಎ. ಬೋಳ ಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರ ನ್ಯಾಯಪೀಠ ವಿಚಾರಣೆ ನಡೆಸಿತು. ಗ್ರಾಹಕರು ತಮ್ಮ ವಿರಾಮದ ಸಮಯದಲ್ಲಿ ಪ್ರವಾಸಿ ತಾಣಗಳನ್ನು ವೀಕ್ಷಣೆಗೆ ಹೋದಾಗ ಅವರು ತಮ್ಮ ವಾಸ್ತವ್ಯಕ್ಕೆ ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ರೂ. 17,752/- ಮುಂಗಡ ಹಣ ಪಾವತಿಸಿ ಅನಂತ ರೆಸಿಡೆನ್ಸಿ ಹೋಟೆಲ್‌ನಲ್ಲಿ 8 ಕೋಣೆಗಳನ್ನು ಕಾಯ್ದಿರಿಸಿದ್ದರು.
ಕಾಯ್ದಿರಿಸಿದ ದಿನ ತಮ್ಮ ಸೇವೆಯನ್ನು ನೀಡುವಲ್ಲಿ ಎದುರುದಾರರು ವಿಫಲರಾದರು. ಗ್ರಾಹಕರಿಗೆ ತಾವು ಕಾಯ್ದಿರಿಸಿದ ರೂಮುಗಳು ಇಲ್ಲ ಎಂದು ಹೇಳಿದರು. ಡಿಸೆಂಬರ್ ನ ಕೊರೆಯುವ ಚಳಿಯಲ್ಲಿ ಹೋಟೆಲ್ ಆವರಣದಲ್ಲಿ ತಮ್ಮ ವಾಹನದಲ್ಲಿ ಇರುವಂತೆ ಮಾಡಿ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳನ್ನು ಸೇರಿ 21 ದೂರುದಾರರಿಗೆ ಅನನುಕೂಲ, ಹಣಕಾಸಿನ ಹಾಗೂ ಮಾನಸಿಕ ಮತ್ತು ದೈಹಿಕ ತೊಂದರೆ ಎಸಗಿ ಅನಂತ ರೆಸಿಡೆನ್ಸಿ ಹೋಟೆಲ್ ಸೇವಾ ನ್ಯೂನ್ಯತೆ ಎಸಗಿದ್ದಲ್ಲದೆ ಗ್ರಾಹಕರಿಗೆ ವಂಚನೆ ಮಾಡಿದ್ದಾರೆ ಎಂದು ಆಯೋಗ ತೀರ್ಪು ನೀಡಿದೆ.
ಅನಂತ ರೆಸಿಡೆನ್ಸಿ ಹೋಟೆಲ್ ನಲ್ಲಿ ರೂಮ್ ಕಾಯ್ದಿರಿಸಲು ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ರೂ.1 ,820/- ಹಣವನ್ನು ಸೇವಾ ಶುಲ್ಕವಾಗಿ ಪಡೆದಿದ್ದಾರೆ. ಅನಂತ ರೆಸಿಡೆನ್ಸಿಗೆ ದೂರುದಾರರ ಉಳಿದ ಹಣ ಹೋಗಿರುವುದರಿಂದ ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಸೇರಿ ಎಲ್ಲ ನಾಲ್ಕು ಜನ ಎದುರುದಾರರಿಂದ ದೂರುದಾರರಿಗೆ ಸೇವಾ ನ್ಯೂನತೆಯಾಗಿದ್ದು ಎಲ್ಲ ಎದುರುದಾರರು ಗ್ರಾಹಕರ ಹಿತರಕ್ಷಣಾ ಕಾಯ್ದೆಯಡಿ ಲೋಪ ಎಸಗಿದ್ದಾರೆ ಎಂದು ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥ ಮಾಡಿತು ಮತ್ತು ಎಲ್ಲ ಎದುರುದಾರರು 21 ಜನ ದೂರುದಾರರಿಗೆ ಪರಿಹಾರ ಕೊಡಲು ಬದ್ಧರಾಗಿದ್ದಾರೆ ಎಂದು ತೀರ್ಪು ನೀಡಿತು.
ಮೇಕ್ ಮೈ ಟ್ರಿಪ್, ಓಯೋ ಮತ್ತು ಅನಂತ ರೆಸಿಡೆನ್ಸಿ ಸೇರಿ 21 ಜನ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ರೂ 50,000/-ರಂತೆ ಒಟ್ಟು ರೂ 10,50,000/- ಹಾಗೂ ಐದು ದೂರು ಪ್ರಕರಣಗಳ ಖರ್ಚು ವೆಚ್ಚ ತಲಾ ರೂ. 10,000/- ಸಹಿತ ಒಟ್ಟು ರೂ. 11,38,000/- ಪರಿಹಾರವನ್ನು ಒಂದು ತಿಂಗಳ ಒಳಗಾಗಿ ನೀಡಲು ಆಯೋಗ ಆದೇಶ ಹೊರಡಿಸಿತು.
ಇದಕ್ಕೆ ತಪ್ಪಿದ್ದಲ್ಲಿ ಒಟ್ಟು ಪರಿಹಾರ ಮೊತ್ತದ ಮೇಲೆ ವಾರ್ಷಿಕ ಶೇ. 8ರ ದರದಲ್ಲಿ ದಂಡನಾ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಸಂದಾಯ ಮಾಡಬೇಕು ಎಂದು ಎದುರುದಾರರಿಗೆ ನಿರ್ದೇಶನ ನೀಡಿದೆ.