Consumer Awareness | ಖರೀದಿ ಬಳಿಕ ದೋಷ ಕಂಡುಬಂದರೆ ಗ್ರಾಹಕ ನ್ಯಾಯಾಲಯಕ್ಕೆ ಮುಕ್ತ ಮಾರ್ಗ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಖರೀದಿ ಬಳಿಕ ದೋಷ ಕಂಡುಬಂದರೆ ಗ್ರಾಹಕ ನ್ಯಾಯಾಲಯಕ್ಕೆ ಮುಕ್ತ ಮಾರ್ಗ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
# ರಾಷ್ಟ್ರೀಯ ಗ್ರಾಹಕ ಆಯೋಗದ ತೀರ್ಪು ತಿರಸ್ಕರಿಸಿದ ಸುಪ್ರೀಂ ಕೋರ್ಟ್
# ಖರೀದಿ ಬಗ್ಗೆ ಅರಿವು ಇದೆ ಎಂಬ ಕಾರಣಕ್ಕೆ ದೂರು ತಿರಸ್ಕರಿಸುವಂತಿಲ್ಲ
ಗ್ರಾಹಕರಿಗೆ ತಾವು ಖರೀದಿಸುವ ವಸ್ತುವಿನ ಅರಿವು ಇದೆ ಎಂಬ ಕಾರಣಕ್ಕೆ ಅವರ ಗ್ರಾಹಕ ದೂರುಗಳನ್ನು ಗ್ರಾಹಕ ನ್ಯಾಯಾಲಯಗಳು ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗ್ರಾಹಕರಿಗೆ ಉತ್ಪನ್ನದ ಬಗ್ಗೆ ಅರಿವು ಇತ್ತು ಎಂಬ ಕಾರಣಕ್ಕೆ ಗ್ರಾಹಕ ವ್ಯಾಜ್ಯವನ್ನು ತಿರಸ್ಕರಿಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(NCDRC) ಆದೇಶದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ. ಎಸ್. ರವೀಂದ್ರ ಭಟ್ ಮತ್ತು ದೀಪಾಂಕರ್ ದತ್ತಾ ಈ ತೀರ್ಪು ನೀಡಿದ್ದಾರೆ.
ಗ್ರಾಹಕರಿಗೆ ತಮ್ಮ ಖರೀದಿ ಬಗ್ಗೆ ಅರಿವು ಇತ್ತು ಎಂಬ ಕಾರಣಕ್ಕೆ ವ್ಯಾಜ್ಯವನ್ನು ತಿರಸ್ಕರಿಸಿದರೆ ಇಡೀ ಗ್ರಾಹಕ ಕಾಯ್ದೆಯ ಧ್ಯೇಯೋದ್ದೇಶವೇ ಸೋಲುತ್ತದೆ, ಗ್ರಾಹಕ ಪರ ನ್ಯಾಯ ಎಂಬುದು ಮರೀಚಿಕೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಖರೀದಿ ಬಳಿಕ ಯಾವುದೇ ದೋಷ ಕಂಡುಬಂದರೆ ಅದು ಗ್ರಾಹಕ ಆಯೋಗಗಳಲ್ಲಿ ಪರಿಹಾರ ಪಡೆಯುವುದಕ್ಕೆ ಸಂತ್ರಸ್ತ ಗ್ರಾಹಕರಿಗೆ ಮುಕ್ತ ಮಾರ್ಗ ತೆರೆಯುತ್ತದೆ ಎಂದು ನ್ಯಾಯಪೀಠ ಒತ್ತಿ ಹೇಳಿದೆ. ಈ ಮೂಲಕ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಆದೇಶವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
ಆಯೋಗದ ಆದೇಶ ತರ್ಕವನ್ನು ಧಿಕ್ಕರಿಸಿದೆ. ಕೆಲವು ಅಂಶಗಳ ಕುರಿತಂತೆ ಆದೇಶ ನಿಷ್ಕ್ರಿಯವಾಗಿದ್ದು, ತರ್ಕಬದ್ಧ ನಿರ್ಧಾರಕ್ಕೆ ಬರುವುದು ಮತ್ತು ಸೇವಾದಾರರು ಅನ್ಯಾಯದ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬುದನ್ನು ಪರಿಶೀಲಿಸಿ ವಸ್ತುನಿಷ್ಟ ಮತ್ತು ವಿವೇಚನೆ ಬಳಸಿ ದೂರನ್ನು ಪರಿಗಣಿಸುವುದು ಆಯೋಗದ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.
ದೇಬಾಶಿಸ್ Vs ಅಧ್ಯಕ್ಷರು, ಆರ್‌ಎನ್‌ಆರ್ ಎಂಟರ್‌ಪ್ರೈಸಸ್, ಕೊಲ್ಕತ್ತಾ
ಸುಪ್ರೀಂ ಕೋರ್ಟ್
.