ದಿನಗೂಲಿ ನೌಕರ ಹುದ್ದೆ ಖಾಯಂ ಮಾಡಲು ಸಕ್ಷಮ ನೇಮಕಾತಿ ಪ್ರಾಧಿಕಾರ ಮಾತ್ರ ಸಮರ್ಥ: ಸುಪ್ರೀಂ ಕೋರ್ಟ್
ದಿನಗೂಲಿ ನೌಕರ ಹುದ್ದೆ ಖಾಯಂ ಮಾಡಲು ಸಕ್ಷಮ ನೇಮಕಾತಿ ಪ್ರಾಧಿಕಾರ ಮಾತ್ರ ಸಮರ್ಥ: ಸುಪ್ರೀಂ ಕೋರ್ಟ್
ಮಂಜೂರಾದ ಹುದ್ದೆಗೆ ಸಕ್ಷಮ ಪ್ರಾಧಿಕಾರ (ನೇಮಕಾತಿ ಹೊಣೆ ಹೊತ್ತ ಇಲಾಖಾ ಪ್ರಾಧಿಕಾರ) ನೇಮಕ ಮಾಡಿರದ ಹೊರತು ದಿನಗೂಲಿ ನೌಕರನ ಸೇವೆಯನ್ನು ಖಾಯಂ ಮಾಡಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತನ್ನ ಸೇವೆಯನ್ನು ಖಾಯಂ ಮಾಡಬೇಕು ಎಂದು ಮಧ್ಯಪ್ರದೇಶದ ವಿಭೂತಿ ಶಂಕರ್ ಪಾಂಡೆ ಎಂಬ ದಿನಗೂಲಿ ನೌಕರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್ ರವೀಂದ್ರ ಭಟ್ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಸದ್ರಿ ಪ್ರಕರಣದಲ್ಲಿ ಮಧ್ಯಪ್ರದೇಶದ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ 2020ರ ಫೆಬ್ರವರಿ 13ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಭೂತಿ ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
1980ರಲ್ಲಿ ಮಧ್ಯಪ್ರದೇಶದ ಜಲಸಂಪನ್ಮೂಲ ಇಲಾಖೆ ಯೋಜನೆ ಅಡಿಯಲ್ಲಿ ಅರ್ಜಿದಾರರಾದ ವಿಭೂತಿ ಶಂಕರ್ ಪಾಂಡೆ ದಿನಗೂಲಿ ಆಧಾರದ ಮೇಲೆ ಸೂಪರ್‌ವೈಸರ್ ಆಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಈ ಹುದ್ದೆಗೆ ಸೇರಲು ಗಣಿತದೊಂದಿಗೆ ಮೆಟ್ರಿಕ್ಯುಲೆಶನ್ ತೇರ್ಗಡೆಯಾಗಿರಬೇಕಿತ್ತು. ವಿಭೂತಿಶಂಕರ್ ಅವರಿಗೆ ಈ ಅರ್ಹತೆ ಇರಲಿಲ್ಲ. ಆದರೆ, 2010ರ ಡಿಸೆಂಬರ್ 31ರಂದು ಈ ಹುದ್ದೆಗೆ ನಿಗದಿಪಡಿಸಿದ್ದ ಶೈಕ್ಷಣಿಕ ಅರ್ಹತೆಯಲ್ಲಿ ವಿನಾಯಿತಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ತಮ್ಮ ಸೂಪರ್‌ವೈಸರ್/ಟೈಂ ಕೀಪರ್ ಹುದ್ದೆಯನ್ನು ಖಾಯಂಗೊಳಿಸುವಂತೆ ಅವರು ಇಲಾಖೆಯನ್ನು ಕೋರಿದ್ದರು. ಆದರೆ, ಅರ್ಜಿ ಹಾಕುವ ಸಂದರ್ಭದಲ್ಲಿ ಅವರಿಗೆ ಈ ಹುದ್ದೆಗೆ ಅಗತ್ಯವಿದ್ದ ಕನಿಷ್ಠ ವಿದ್ಯಾರ್ಹತೆ ಇರಲಿಲ್ಲ.
ತನಗಿಂತ ಕಿರಿಯರ ಸೇವೆಯನ್ನು 1990ರಲ್ಲಿ ಹಾಗೂ ಅದಕ್ಕೂ ಮುಂಚೆ ಖಾಯಂ ಗೊಳಿಸಲಾಗಿದೆ ಎಂದು ಅವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಅಲ್ಲದೆ, ಸರ್ಕಾರ ವಿದ್ಯಾರ್ಹತೆಯ ಷರತ್ತನ್ನು ಸಡಿಲಗೊಳಿಸಿದ್ದರಿಂದ ದೀರ್ಘಾವಧಿಯಿಂದ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮ್ಮನ್ನು ಖಾಯಂ ಮಾಡುವಂತೆ ಅವರು ಕೋರಿದ್ದರು.
ಆದರೆ, ಖಾಯಮಾತಿಗೆ ಕನಿಷ್ಠ ವಿದ್ಯಾರ್ಹತೆ ಅಡ್ಡಿಯಾಗದು ಎಂದ ಹೈಕೋರ್ಟ್, ಅರ್ಜಿದಾರ ಯಾವುದೇ ಹುದ್ದೆಗೆ ನೇಮಕಗೊಂಡಿಲ್ಲ ಎಂಬ ಆಧಾರದಲ್ಲಿ ಅರ್ಜಿಯನ್ನು ತಿರಸ್ಕರಿಸಿತು.
ಅರ್ಜಿದಾರರ ನೇಮಕಾತಿ ಸಕ್ಷಮ ಪ್ರಾಧಿಕಾರದಿಂದ ನಡೆದಿಲ್ಲ ಮತ್ತು ಅರ್ಜಿದಾರರನ್ನು ಸಕ್ರಮಗೊಳಿಸುವಂತೆ ಕೋರಿದಾಗ ಯಾವುದೇ ಹುದ್ದೆ ಲಭ್ಯ ಇರಲಿಲ್ಲ ಎಂದು ಅರ್ಜಿ ತಿರಸ್ಕರಿಸಿದ ಸಂಬಂಧಪಟ್ಟ ಪ್ರಾಧಿಕಾರ ಷರಾ ಬರೆದಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.
ಕಾರ್ಯದರ್ಶಿ , ಕರ್ನಾಟಕ ಸರ್ಕಾರ Vs ಉಮಾದೇವಿ ಪ್ರಕರಣ(2006)ದ ತೀರ್ಪಿನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಉದ್ಯೋಗ ಖಾಯಂ ಮಾಡಲು ನೇಮಕಾತಿ ಸಕ್ಷಮ ಪ್ರಾಧಿಕಾರದಿಂದ ಆಗಿರಬೇಕು, ಜೊತೆಗೆ ಮಂಜೂರಾದ ಹುದ್ದೆಗೆ ದಿನಗೂಲಿ ನೌಕರ ನೇಮಕಾತಿ ಆಗಿರಬೇಕು ಎಂದು ವಿವರಿಸಿತು.
ಪ್ರಕರಣ: ವಿಭೂತಿ ಶಂಕರ್ ಪಾಂಡೆ Vs ಮಧ್ಯಪ್ರದೇಶ
ಸುಪ್ರೀಂ ಕೋರ್ಟ್