ಒತ್ತುವರಿ ತೆರವು, ನೋಟೀಸ್ ನೀಡುವ ಅಧಿಕಾರ ಡಿಸಿಗೆ ಮಾತ್ರ: ಹೈಕೋರ್ಟ್
ಒತ್ತುವರಿ ತೆರವು, ನೋಟೀಸ್ ನೀಡುವ ಅಧಿಕಾರ ಡಿಸಿಗೆ ಮಾತ್ರ: ಹೈಕೋರ್ಟ್
ಸರ್ಕಾರದ ಜಮೀನು ಒತ್ತುವರಿ ಆಗಿದ್ದರೆ ಅದನ್ನು ತೆರವುಗೊಳಿಸುವ ಮತ್ತು ಒತ್ತುವರಿ ಮಾಡಿದವರಿಗೆ ನೋಟಿಸ್ ನೀಡುವ ಅಧಿಕಾರ ಆಯಾ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಹಶೀಲ್ದಾರ್ ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ನೀಡಿದ್ದ ನೋಟಿಸ್‌ನ್ನು ರದ್ದು ಮಾಡುವಂತೆ ಬಾಲಪ್ಪ ಸೇರಿದಂತೆ ಎಂಟು ಜನ ರೈತರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಇ.ಎಸ್. ಇಂದಿರೇಶ್ ಈ ತೀರ್ಪು ನೀಡಿದ್ದಾರೆ.
ಕರ್ನಾಟಕ ಭೂಕಂದಾಯ ಕಾಯಿದೆ 1964ರ ಕಲಂ 94(3)ಹಾಗೂ 39(1)ರ ಅಡಿಯಲ್ಲಿ ಒತ್ತುವರಿದಾರರಿಗೆ ತಹಶೀಲ್ದಾರ್‌ರವರು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಸೆಕ್ಷನ್ 39 ರ ಪ್ರಕಾರ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದರೆ, ಜಿಲ್ಲಾಧಿಕಾರಿ ಒತ್ತುವರಿ ಜಮೀನಿನ ತೆರವು ಮಾಡಿಸುವ ಕಾರ್ಯ ಕೈಗೊಳ್ಳಬೇಕು ಮತ್ತು ತೆರವು ಕಾರ್ಯಾಚರಣೆಗೆ ಮುನ್ನ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ನ್ಯಾಯಪೀಠ ಗಮನಿಸಿತು.
ಈ ನೋಟಿಸ್ ಜಾರಿಗೊಂಡ ಬಳಿಕ ಅತಿಕ್ರಮಣದ ತೆರವಿಗೆ ನ್ಯಾಯೋಚಿತ ಕಾಲಾವಕಾಶ ನೀಡಬೇಕು. ಒತ್ತುವರಿ ಮಾಡಿದವರು ನೋಟಿಸ್ ಸೂಚನೆಯನ್ನು ಪಾಲಿಸದಿದ್ದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿಯೇ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಇಲ್ಲವೇ ತಮ್ಮ ಅಧೀನದ ಅಧಿಕಾರಿಯನ್ನು ತೆರವು ಕಾರ್ಯಾಚರಣೆಗೆ ನಿಯೋಜಿಸಬೇಕು ಎಂದು ಅದು ಹೇಳಿದೆ.
ತೆರವು ಕಾರ್ಯಾಚರಣೆಗೆ ಯಾರಾದರೂ ಅಡ್ಡಿ ಮಾಡಿದರೆ, ಆ ಕುರಿತು ಪ್ರಕರಣದ ಸತ್ಯಾಂಶ ತಿಳಿಯಲು ಜಿಲ್ಲಾಧಿಕಾರಿ ಅಥವಾ ಕಂದಾಯ ಅಧಿಕಾರಿ ವಿಚಾರಣೆ ನಡೆಸಬೇಕು. ಸೂಕ್ತ ಕಾರಣವಿಲ್ಲದೇ ಅಧಿಕಾರಿಗೆ ಅಡ್ಡಿಪಡಿಸಿರುವುದು ಸಾಬೀತಾದಲ್ಲಿ ಮತ್ತು ಅಡ್ಡಿಪಡಿಸುವ ಕಾರ್ಯ ಮುಂದುವರಿಸಿದರೆ, ಅಂತಹವರ ವಿರುದ್ಧ ಸೂಕ್ತ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆದೇಶ ಹೇಳಿದೆ.
ಜಮೀನು ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸಕ್ಷಮ ಅಧಿಕಾರಿ. ತಹಶೀಲ್ದಾರ್ ಯಾವುದೇ ಅಧಿಕಾರ ಹೊಂದಿಲ್ಲ. ಹಾಗಾಗಿ, ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಲು ರಾಯಭಾಗ ತಹಶೀಲ್ದಾರ್ ಅವರಿಗೆ ಅಧಿಕಾರವಿಲ್ಲ. ಅವರು ಸಕ್ಷಮ ಅಧಿಕಾರಿಯೂ ಅಲ್ಲ. ಈ ಕಾರಣದಿಂದ ತಹಶೀಲ್ದಾರ್ ಜಾರಿಗೊಳಿಸಿದ್ದ ನೋಟಿಸನ್ನು ನ್ಯಾಯಪೀಠ ರದ್ದುಗೊಳಿಸಿತು.