ಶೇ. 50 ರಿಯಾಯಿತಿ ದಂಡ ಪಾವತಿಸದ ಸವಾರ: ಆರೋಪಿಗೆ ಬಿಸಿ ಮುಟ್ಟಿಸಿದ ನ್ಯಾಯಾಲಯ
ಶೇ. 50 ರಿಯಾಯಿತಿ ದಂಡ ಪಾವತಿಸದ ಸವಾರ: ಆರೋಪಿಗೆ ಬಿಸಿ ಮುಟ್ಟಿಸಿದ ನ್ಯಾಯಾಲಯ
ಶೇಕಡಾ 50ರಷ್ಟು ರಿಯಾಯಿತಿ ನೀಡಿ ಸಂಚಾರ ನಿಯಮ ಉಲ್ಲಂಘಿಸಿದ ದಂಡವನ್ನು ನ್ಯಾಯಾಲಯಕ್ಕೆ ಪಾವತಿಸದ ಸವಾರನಿಗೆ ನ್ಯಾಯಾಲಯ ಕಠಿಣ ಆದೇಶ ಮಾಡಿ ಬಿಸಿ ಮುಟ್ಟಿಸಿದೆ.
ಅಮಲು ಪದಾರ್ಥ ಸೇವಿಸಿ ಮಾನವ ಜೀವಕ್ಕೆ ಅಪಾಯವೊಡ್ಡುವ ರೀತಿಯಲ್ಲಿ ಹಾಗೂ ಹೆಲ್ಮೆಟ್ ಧರಿಸದೆ ಆರೋಪಿ ವಾಹನ ಚಾಲನೆ ಮಾಡಿದ್ದರು.
ಚಿತ್ರದುರ್ಗ ನಗರದ ಸಂಪಿಗೆ ಸಿದ್ದೇಶ್ವರ ಶಾಲೆ ಸಮೀಪ ನಿವಾಸಿ ಟಿ ರವಿಕುಮಾರ್ ಬೈಕ್ ಸವಾರ.
ಚಿತ್ರದುರ್ಗದ ಹಮಾಲಿ ಕಾರ್ಮಿಕನಾಗಿರುವ ರವಿಕುಮಾರ್ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಅಡಿ ಫೆಬ್ರವರಿ 2ರಂದು ಮೆದಿಹಳ್ಳಿ ರಸ್ತೆಯಲ್ಲಿ ಈ ಕೃತ್ಯ ಎಸಗಿದ್ದರು. ಈ ಸಂದರ್ಭದಲ್ಲಿ ಸಂಚಾರ ಠಾಣೆ ಪೋಲಿಸರಿಗೆ ಸಿಕ್ಕಿಬಿದ್ದಿದ್ದರು.
ಪೊಲೀಸರು ಈ ಆರೋಪಿಗೆ ಅಮಲು ಪದಾರ್ಥ ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ 10,000/-, ಅಪಾಯಕಾರಿ ಚಾಲನೆಗೆ 10,000/- ಹಾಗೂ ಹೆಲ್ಮೆಟ್ ಧರಿಸದೆ ಇರುವುದಕ್ಕೆ 5000 ದಂಡ ವಿಧಿಸಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗೆ ನ್ಯಾಯಾಲಯಕ್ಕೆ ಹಾಜರಾಗಿ ದಂಡಪಾವತಿಸುವಂತೆ ಒತ್ತಡ ಹಾಕಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದ ಆರೋಪಿ ತಪ್ಪೊಪ್ಪಿಗೆ ಮಾಡಿದ್ದರು.
ಚಿತ್ರದುರ್ಗ ಸಿ ಜೆ ಎಂ ನ್ಯಾಯಾಲಯಕ್ಕೆ ಹಾಜರಾದ ರವಿಕುಮಾರ್ ಅವರಿಗೆ ದಂಡದ ಮೊತ್ತದಲ್ಲಿ 50ರಷ್ಟು ವಿನಾಯಿತಿ ನೀಡಿದ ನ್ಯಾಯಾಧೀಶ ಕೆಂಪರಾಜು 10250/- ದಂಡ ಕಟ್ಟುವಂತೆ ಸೂಚಿಸಿದರು. ಆದರೆ, ಆರೋಪಿ ರವಿಕುಮಾರ್ ತನ್ನಲ್ಲಿ ರೂ. 2000/- ಮಾತ್ರ ಇರುವುದಾಗಿ ಹೇಳಿದರು.
ಆಗ, ನ್ಯಾಯಾಧೀಶರು ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಈ ಮೂಲಕ ದಂಡ ಪಾವತಿಸದ ಅರೋಪಿಗೆ ಕಂಬಿ ಎಣಿಸುವ ಭಾಗ್ಯ ಒದಗಿಬಂದಿದೆ.