ಪರಿಹಾರ ನೀಡಿದ ಸೈಟನ್ನು ಕಿತ್ತುಕೊಂಡ ಸ್ಥಳೀಯಾಡಳಿತ: ಅಧಿಕಾರಿಗಳಿಗೆ ಲಕ್ಷ ರೂ ಫೈನ್ ಹಾಕಿದ ಹೈಕೋರ್ಟ್!
ಪರಿಹಾರ ನೀಡಿದ ಸೈಟನ್ನು ಕಿತ್ತುಕೊಂಡ ಸ್ಥಳೀಯಾಡಳಿತ: ಅಧಿಕಾರಿಗಳಿಗೆ ಲಕ್ಷ ರೂ ಫೈನ್ ಹಾಕಿದ ಹೈಕೋರ್ಟ್!
ದಲಿತ ಮಹಿಳೆಗೆ ಪರಿಹಾರವಾಗಿ ನೀಡಿದ್ದ ಸೈಟಿನಲ್ಲಿ ಸರ್ಕಾರಿ ನಾಡ ಕಚೇರಿ ಕಟ್ಟುವ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂ. ದಂಡ ಹಾಕಿದೆ. ಅಲ್ಲದೆ, ಪರಿಹಾರವಾಗಿ ನೀಡಿದ್ದ ಸೈಟನ್ನು ಮರಳಿ ಕೊಡುವಂತೆ ಮನೆ ಸಹಿತ ನೀಡುವಂತೆ ಆದೇಶ ಮಾಡಿದೆ.
2008ರಲ್ಲಿ ಮ್ಯಾನ್ ಹೋಲ್ ಕ್ಲೀನ್ ಮಾಡುವ ವೇಳೆ ಪೌರ ಕಾರ್ಮಿಕ ಮೃತಪಟ್ಟ ಹಿನ್ನೆಲೆಯಲ್ಲಿ ಪತ್ನಿಗೆ ಸೈಟನ್ನು ಪರಿಹಾರವಾಗಿ ನೀಡಲಾಗಿತ್ತು. ಆದರೆ, ಇತ್ತೀಚೆಗೆ ಅದೇ ಜಾಗದಲ್ಲಿ ನಾಡ ಕಚೇರಿ ಕಟ್ಟಲು ಯೋಜನೆಯನ್ನು ರೂಪಿಸಲಾಗಿತ್ತು. ಅದನ್ನು ಪ್ರಶ್ನಿಸಿ ಸಂತ್ರಸ್ತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾ. ಎಂ ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ, ದಲಿತ ಮಹಿಳೆಗೆ ತೊಂದರೆ ನೀಡಿದ್ದಕ್ಕೆ ಅಧಿಕಾರಿಗಳಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಮಹಿಳೆಗೆ ಕಟ್ಟಿರುವ ಮನೆ ಸಹಿತ ನೀಡಬೇಕು ಎಂದು ಆದೇಶಿಸಿದೆ. ಉಳ್ಳವರು, ಬಲಶಾಲಿಗಳು ಮತ್ತು ಅಧಿಕಾರಸ್ಥರು ಬಡವರ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕೆ ತಡೆಯೊಡ್ಡಲು ಇದು ಸರಿಯಾದ ಸಮಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ
ಬೆಂಗಳೂರಿನ ಯಲಹಂಕದಲ್ಲಿ 2008ರಲ್ಲಿ ನರಸಿಂಹಯ್ಯ ಎಂಬುವರು ಮ್ಯಾನ್ ಹೋಲ್ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶದ ಪ್ರಕಾರ, ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ 1200 ಚದರ ಅಡಿ ಸೈಟನ್ನು ಪರಿಹಾರ ರೂಪದಲ್ಲಿ ಪತ್ನಿ ನಾಗಮ್ಮ ಅವರಿಗೆ ಮಂಜೂರು ಮಾಡಿತ್ತು.
ಆದರೆ, ಅದೇ ಸ್ಥಳದಲ್ಲಿ ನಾಡಕಚೇರಿ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ಸರ್ಕಾರವೇ ಪರಿಹಾರವಾಗಿ ನೀಡಿದ ಸೈಟನ್ನು ಕಸಿದುಕೊಳ್ಳುವ ಗ್ರಾಮ ಪಂಚಾಯತ್‌ನ ನಿರ್ಧಾರ ಪ್ರಶ್ನಿಸಿ ನಾಗಮ್ಮ ಹೈಕೋರ್ಟ್ ಮೊರೆ ಹೋಗಿದ್ದರು.
ಅಧಿಕಾರಿಗಳಿಗೆ ದಂಡ ಹಾಕಿದ ನ್ಯಾಯಪೀಠ!
ಸ್ಥಳೀಯಾಡಳಿತದ ಅಧಿಕಾರಿಗಳ ಕ್ರಮಕ್ಕೆ ಹೈಕೋರ್ಟ್ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮೃತ ಕಾರ್ಮಿಕನನ್ನು ಮ್ಯಾನ್ ಹೋಲ್ ಶುಚಿಗೆ ಬಳಸಿದ್ದೇ ತಪ್ಪು. ಸಂತ್ರಸ್ತ ಕುಟುಂಬಕ್ಕೆ ಪುನರ್ವಸತಿ ನೀಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಹೇಳಿದ ನ್ಯಾಯಪೀಠ, ಅರ್ಜಿದಾರರಿಗೆ ಅವರ ನಿವೇಶನವನ್ನು ಮನೆ ಸಹಿತ ವಾಪಸ್ ನೀಡಬೇಕು. ಅದಕ್ಕೆ ಬೇಕಾದ ಹಣಕಾಸಿನ ನೆರವು ನೀಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಒಟ್ಟು ಸೇರಿ 50 ಸಾವಿರ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ರೂ. 50 ಸಾವಿರ ಹಣವನ್ನು ದಂಡ ಪರಿಹಾರವಾಗಿ ನಾಗಮ್ಮ ಅವರಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.