100 ರೂ. ಲಂಚ: ರೈಲ್ವೇ ಕರ್ಕ್‌ಗೆ ಒಂದು ವರ್ಷ ಜೈಲು, 15,000 ದಂಡ!- ಏನಿದು ಪ್ರಕರಣ?
100 ರೂ. ಲಂಚ: ರೈಲ್ವೇ ಕರ್ಕ್‌ಗೆ ಒಂದು ವರ್ಷ ಜೈಲು, 15,000 ದಂಡ!- ಏನಿದು ಪ್ರಕರಣ?
ಕೇವಲ ನೂರು ರೂಪಾಯಿ ಲಂಚ ಪಡೆದ ರೈಲ್ವೇ ಕರ್ಕ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ವಾಸ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿದೆ.
1991ರ ಪ್ರಕರಣವನ್ನು ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯ, ಇಂತಹ ಅಪರೂಪದ ಹಾಗೂ ಸಮಾಜಕ್ಕೆ ಸ್ಪಷ್ಟ ಸಂದೇಶ ಸಾರುವ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಆಗಿನ ಉತ್ತರ ರೈಲ್ವೇ ಕಾರು ಚಾಲಕ ರಾಮ್ ಕುಮಾರ್ ತಿವಾರಿ ಅವರಿಂದ ಆರೋಪಿ ಕ್ಲರ್ಕ್ ರಾಮನಾರಾಯಣ ವರ್ಮಾ ನೂರು ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು.
30 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಸ್ಪೆಷಲ್ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ತೀರ್ಪಿಗೆ ಮುನ್ನ ಮನವಿ ಮಾಡಿದ್ದ ಆರೋಪಿ ರಾಮನಾರಾಯಣ ವರ್ಮಾ, ತನ್ನ ಇಳಿ ವಯಸ್ಸಿನ ಕಾರಣವನ್ನು ಮುಂದಿಟ್ಟು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿದ್ದರು.
ಆದರೆ, ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತು. ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಒಂದು ವೇಳೆ ಅಪರಾಧಿಗೆ ಕರುಣೆ ತೋರಿಸಿದರೆ ಅದು ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂದು ನ್ಯಾಯಾಧೀಶರು ತೀರ್ಪು ನೀಡುವ ವೇಳೆ ಸ್ಪಷ್ಟಪಡಿಸಿದ್ದಾರೆ.
ಸೇವಾ ಅವಧಿಯಲ್ಲಿ ತಮ್ಮ ಪಿಂಚಣಿ ದಾಖಲಾತಿಗೆ ಸಂಬಂಧಿಸಿದಂತೆ ಅಪರಾಧಿ ವರ್ಮ 150 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಅದನ್ನು ಆ ಬಳಿಕ ನೂರು ರೂಪಾಯಿಗೆ ಇಳಿಸಿದ್ದರು.
ಈ ಬಗ್ಗೆ ಉತ್ತರ ರೈಲ್ವೆಯ ಚಾಲಕ ರಾಮ್ ಕುಮಾರ್ ತಿವಾರಿ ಎಂಬವರು 1991ರಲ್ಲಿ ವರ್ಮ ವಿರುದ್ಧ ದೂರು ದಾಖಲಿಸಿದ್ದರು ಈ ಲಂಚದ ಹಣ ನೀಡುತ್ತಿದ್ದಾಗ ಆರೋಪಿಯನ್ನು ಲಂಚದ ಹಣದೊಂದಿಗೆ ಸಿಬಿಐ ಪೊಲೀಸರು ಬಂಧಿಸಿದ್ದರು.