Consumer Awareness - ವೈದ್ಯಕೀಯ ನಿರ್ಲಕ್ಷ್ಯ: ಪ್ರಸೂತಿ ತಜ್ಞೆಗೆ 11 ಲಕ್ಷ ರೂ. ದಂಡ ಹಾಕಿದ ಗ್ರಾಹಕ ನ್ಯಾಯಾಲಯ
ವೈದ್ಯಕೀಯ ನಿರ್ಲಕ್ಷ್ಯ: ಪ್ರಸೂತಿ ತಜ್ಞೆಗೆ 11 ಲಕ್ಷ ರೂ. ದಂಡ ಹಾಕಿದ ಗ್ರಾಹಕ ನ್ಯಾಯಾಲಯ
ವಾಸ್ತವ ಮುಚ್ಚಿಟ್ಟು ಅಂಗವಿಕಲ ಮಗುವಿನ ಜನನಕ್ಕೆ ಕಾರಣವಾದ ಪ್ರಸೂತಿ ತಜ್ಞೆಯೊಬ್ಬರಿಗೆ ಬರೋಬ್ಬರಿ 11 ಲಕ್ಷ ರೂ. ದಂಡ ವಿಧಿಸಿದ ಪ್ರಕರಣ ಕರ್ನಾಟಕದ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಪ್ರಶಾಂತ ನರ್ಸಿಂಗ್ ಹೋಂನ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯರಾಗಿದ್ದಾರೆ.
ಧಾರವಾಡದ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಈಶಪ್ಪ ಕೆ. ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ನಗರದ ಶ್ರೀನಗರ ಬಡಾವಣೆಯ ಬಾವಿಕಟ್ಟಿ ನಿವಾಸಿ ಪರಶುರಾಮ ಘಾಟ್ಗೆ ಮತ್ತು ಪ್ರೀತಿ ದಂಪತಿ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಅವರ ನರ್ಸಿಂಗ್ ಹೋಂಗೆ ಭೇಟಿ ನೀಡಿದ್ದರು.
ಗರ್ಭಿಣಿ ಸಂದರ್ಭದಲ್ಲಿ ತಮ್ಮ ಮಗುವಿನ ಆರೋಗ್ಯ ವಿಚಾರಣೆಗೆ ಐದು ಬಾರಿ ಸ್ಕ್ಯಾನಿಂಗ್ ಕೂಡ ಮಾಡಿದ್ದರು. 2018ರ ಜುಲೈನಿಂದ 2019ರ ಜನವರಿ ವರೆಗೂ ವೈದ್ಯರು ಹಂತ ಹಂತವಾಗಿ ತಪಾಸಣೆ ಮಾಡಿ ಮಗುವಿನ ಸುಸ್ಥಿರ ಬೆಳವಣಿಗೆ ಮತ್ತು ಆರೋಗ್ಯದ ಬಗ್ಗೆ ಖಾತ್ರಿ ನೀಡಿದ್ದರು.
9ನೇ ತಿಂಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿ ಅಂಗವಿಕಲ ಹೆಣ್ಣು ಮಗು ಜನಿಸಿತು. ಪ್ರತಿಸಲವೂ ಡಾ. ಸೌಭಾಗ್ಯ 'ಭ್ರೂಣದ ಬೆಳವಣಿಗೆ ಚೆನ್ನಾಗಿದೆ, ಆರೋಗ್ಯವಾಗಿದೆ' ಎಂದು ತಿಳಿಸುತ್ತಾ ತಮ್ಮ ಮಗುವಿನ ಅಂಗವೈಕಲ್ಯವನ್ನು ಮರೆಮಾಚಿದ್ದರು. ಈ ಮೂಲಕ ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ದೂರನ್ನು ವಿಚಾರಣೆ ನಡೆಸಿದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಡಾ. ಸೌಭಾಗ್ಯ ಕುಲಕರ್ಣಿ ವಿರುದ್ಧದ ದೂರನ್ನು ಪುರಸ್ಕರಿಸಿತು.
18ರಿಂದ 20ವಾರಗಳ ಸ್ಕ್ಯಾನಿಂಗ್ ಪ್ರಕಾರ ಹಾಗೂ ಆಲ್ಟ್ರಾ ಸೌಂಡ್ ಸ್ಕ್ಯಾನ್ ನಿಯಮಾವಳಿ ಪ್ರಕಾರ ಮಗುವಿನ ಆರೋಗ್ಯ ಮತ್ತು ಅಂಗಾಂಗಗಳ ಬೆಳವಣಿಗೆ ಕುರಿತು ಸಮಗ್ರ ಮಾಹಿತಿ ವೈದ್ಯರಿಗೆ ಲಭ್ಯವಾಗುತ್ತದೆ. ಆದರೂ ವಾಸ್ತವಾಂಶಗಳನ್ನು ತಿಳಿಸದೆ ಪ್ರಸೂತಿ ತಜ್ಞರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಜನಿಸಿರುವ ಅಂಗವಿಕಲ ಹೆಣ್ಣು ಶಿಶುವಿನ ಈವರೆಗಿನ ಚಿಕಿತ್ಸೆ ಹಾಗೂ ಭವಿಷ್ಯದ ಜೀವನ ನಿರ್ವಹಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 11.10 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿದ ನ್ಯಾಯಾಲಯ, ಇನ್ನು ಒಂದು ತಿಂಗಳೊಳಗೆ ನೀಡದಿದ್ದರೆ ಶೇ. 8ರ ವಿಳಂಬ ದಂಡನಾ ಬಡ್ಡಿ ಜೊತೆಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಪರಿಹಾರದ ಮೊತ್ತದಲ್ಲಿ 8 ಲಕ್ಷ ರೂ.ಗಳನ್ನು ಮಗುವಿನ ಹೆಸರಿನಲ್ಲಿ ಆಕೆ ವಯಸ್ಕಳಾಗುವವರೆಗೆ ದೂರುದಾರರು ಇಚ್ಚಿಸಿದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.