ಆಂಧ್ರ ಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಅಬ್ದುಲ್ ನಜೀರ್
ಆಂಧ್ರ ಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಅಬ್ದುಲ್ ನಜೀರ್
ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದ ಮಂಗಳೂರು ಸಂಜಾತ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರ ಪ್ರದೇಶ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಆಂಧ್ರ ಪ್ರದೇಶ ರಾಜ್ಯಪಾಲರಾಗಿರುವ ವಿಶ್ವಭೂಷಣ ಹರೀಶ್ಚಂದ್ರನ್ ಅವರನ್ನು ಚತ್ತೀಸಘಡ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.
ಜಸ್ಟಿಸ್ ಅಬ್ದುಲ್ ನಜೀರ್ ಅವರು ಜನವರಿ 4, 2023ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾಗಿದ್ದರು.
2017ರ ಫೆಬ್ರವರಿಯಲ್ಲಿ ಅವರು ಕರ್ನಾಟಕ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಹೊಂದಿದ್ದರು.
ರಾಮಮಂದಿರ, ನೋಟು ಅಮಾನ್ಯೀಕರಣ, ತ್ರಿವಳಿ ತಲಾಖ್ ಮೊದಲಾದ ಐತಿಹಾಸಿಕ ಪ್ರಕರಣಗಳಲ್ಲಿ ತೀರ್ಪು ನೀಡಿದ ವಿಭಾಗೀಯ ಪೀಠದಲ್ಲಿ ಅಬ್ದುಲ್ ನಜೀರ್ ನ್ಯಾಯಮೂರ್ತಿಯಾಗಿ ಇದ್ದರು ಎನ್ನುವುದು ಉಲ್ಲೇಖಾರ್ಹ.
2014ರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವನ್ ಕೇರಳ ರಾಜ್ಯಪಾಲರಾಗಿ ನಿಯುಕ್ತರಾಗಿದ್ದರು. ಅದಕ್ಕೂ ಹಿಂದೆ, 1997-2001ರ ಅವಧಿಯಲ್ಲಿ ತಮಿಳುನಾಡು ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಫಾತಿಮಾ ಬೀವಿ ಅಧಿಕಾರ ನಿರ್ವಹಿಸಿದ್ದರು.