ನಿವೃತ್ತರ ಬಾಳಿಗೆ ಬೆಳಕಾದ NPS: ಮಾಹಿತಿ ಹಕ್ಕಿನಲ್ಲಿ ಸಿಕ್ಕ ವಾಸ್ತವ ಸಂಗತಿ ಇದು..!
ನಿವೃತ್ತರ ಬಾಳಿಗೆ ಬೆಳಕಾದ NPS: ಮಾಹಿತಿ ಹಕ್ಕಿನಲ್ಲಿ ಸಿಕ್ಕ ವಾಸ್ತವ ಸಂಗತಿ ಇದು..!
ನಿವೃತ್ತ ನೌಕರರ ಬದುಕಿಗೆ ಬೆಳಕಾದ ಎನ್.ಪಿ.ಎಸ್. ಯೋಜನೆ. ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾದ ವಾಸ್ತವಿಕ ಸಂಗತಿ
ನಿವೃತ್ತ ಸರಕಾರಿ ನೌಕರರ ಪಾಲಿಗೆ ಎನ್.ಪಿ.ಎಸ್. ಯೋಜನೆಯು ಮರಣ ಶಾಸನವಾಗಿದೆ. ಹಾಗಾಗಿ, ಹಳೆಯ ಪಿಂಚಣಿ ಪದ್ಧತಿಯನ್ನು ಅನುಷ್ಠಾನಗೊಳಿಸುವಂತೆ ಸರಕಾರಗಳನ್ನು ಆಗ್ರಹಿಸಿ ದೇಶಾದ್ಯಂತ ಸರಕಾರಿ ನೌಕರರು ಧರಣಿ ಸತ್ಯಾಗ್ರಹಗಳನ್ನು ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಎನ್.ಪಿ. ಎಸ್. ಯೋಜನೆಯು ನಿವೃತ್ತ ನೌಕರರ ಬದುಕಿಗೆ ಬೆಳಕಾಗಿರುವ ಸತ್ಯ ಸಂಗತಿ ರಾಜಸ್ತಾನ ಸರಕಾರದ ವಿಮೆ ಮತ್ತು ಭವಿಷ್ಯ ನಿಧಿ ಇಲಾಖೆಯು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿದ ಮಾಹಿತಿಯಿಂದ ಬಹಿರಂಗವಾಗಿದೆ.
ದಿನಾಂಕ 1.1.2004 ರಿಂದ ರಾಜಸ್ಥಾನ ಸರಕಾರವು ತನ್ನ ರಾಜ್ಯದ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತು. ದಿನಾಂಕ 1.1.2004 ರಿಂದ ಇಲ್ಲಿಯವರೆಗೆ ನೂತನ ಪಿಂಚಣಿ ಯೋಜನೆಯಡಿ 2701 ನೌಕರರು ನಿವೃತ್ತರಾಗಿದ್ದಾರೆ. ಅವರ ಪೈಕಿ 2118 ಮಂದಿ ನಿವೃತ್ತ ನೌಕರರ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ದೊರೆತ ಮಾಹಿತಿ ಈ ಕೆಳಗಿನಂತಿದೆ.
12 ಮಂದಿ ನೌಕರರು ಮಾಸಿಕ ರೂಪಾಯಿ100 ರಿಂದ 500 ರೊಳಗೆ ಪಿಂಚಣಿ ಪಡೆಯುತ್ತಿದ್ದಾರೆ. ಕನಿಷ್ಠ ಪಿಂಚಣಿ ಪಡೆಯುವ ನೌಕರ ಸಲ್ಲಿಸಿದ ಅರ್ಹತಾ ಸೇವೆ ಆರು ತಿಂಗಳಿನಿಂದ ಪ್ರಾರಂಭವಾಗುತ್ತದೆ. ಒಂದು ವರ್ಷ ಸೇವೆ ಸಲ್ಲಿಸಿದ ನೌಕರನ ಮಾಸಿಕ ಪಿಂಚಣಿ ₹148.17 ಕ್ಕೆ ನಿಗದಿಯಾಗಿದೆ.
ಒಂದು ವೇಳೆ ಸದರಿ ನೌಕರ ಹಳೆಯ ಪಿಂಚಣಿ ಯೋಜನೆಗೊಳಪಟ್ಟಲ್ಲಿ ಯಾವುದೇ ಪಿಂಚಣಿ ದೊರಕುತ್ತಿರಲಿಲ್ಲ. ಇಬ್ಬರು ನೌಕರರಿಗೆ 20000 ಕ್ಕೂ ಮೇಲ್ಪಟ್ಟು ಮಾಸಿಕ ಪಿಂಚಣಿ ದೊರಕುತ್ತದೆ, ಗರಿಷ್ಠ ಮಾಸಿಕ ಪಿಂಚಣಿ ರೂಪಾಯಿ 23879/-ಆಗಿದೆ. ಆ ಬಳಿಕ ಎರಡನೆಯ ಗರಿಷ್ಠ ಮಾಸಿಕ ಪಿಂಚಣಿ ₹22393/-ಆಗಿದೆ.
NPS ಹೋರಾಟಗಾರರ ವಿರುದ್ಧ ತಿರುಗಿಬಿದ್ದ
ತ್ರಿಶಂಕು ಸ್ಥಿತಿಯಲ್ಲಿರುವ ನಿವೃತ್ತ NPS ನೌಕರರು
ದಿನಾಂಕ 1.4.2022 ರ ಬಳಿಕ ನಿವೃತ್ತರಾದ ಎನ್ ಪಿ ಎಸ್ ಯೋಜನೆಗೊಳಪಟ್ಟ ನೌಕರರಿಗೆ ರಾಜಸ್ಥಾನ ಸರಕಾರ ಇದುವರೆಗೂ ಪಿಂಚಣಿ ನೀಡಿಲ್ಲ. ಇದಕ್ಕೆ ಮುಖ್ಯ ಕಾರಣ ಸರಕಾರದ ಪಾಲಿನ ಶೇಕಡ 14 ವಂತಿಗೆಯ ಹಣ ಸರಕಾರಕ್ಕೆ ಮರಳಿ ಬಂದಿಲ್ಲ ಎಂಬುದಾಗಿದೆ. ಪಿಎಫ್ಆರ್‌ಡಿಎ ಕಾಯ್ದೆ ಪ್ರಕಾರ ನೌಕರರ ವಂತಿಗೆ ಹಾಗೂ ಸರಕಾರದ ವಂತಿಗೆ ಎರಡು ಕೂಡ ನೌಕರರಿಗೇ ಸಿಗತಕ್ಕದ್ದಾಗಿದೆ. ಸರಕಾರಕ್ಕೆ ಮರಳಿಸುವಂತಿಲ್ಲ. ಹಾಗಾಗಿ ದಿನಾಂಕ 1.4.2022 ರ ಬಳಿಕ ಎನ್ ಪಿ ಎಸ್ ಯೋಜನೆಗೊಳಪಟ್ಟ ನಿವೃತ್ತ ನೌಕರರು ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ.
NPS ಯೋಜನೆಯಡಿ ಈಗಾಗಲೇ ನಿವೃತ್ತರಾದ ನೌಕರರಿಗೆ ದೊಡ್ಡ ಶಾಕ್!
ದಿನಾಂಕ 1.1.2004 ರಿಂದ ಅನ್ವಯವಾಗುವಂತೆ ರಾಜಸ್ಥಾನ ಸರಕಾರವು ತನ್ನ ರಾಜ್ಯದ ಸರಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ ದಿನಾಂಕ 1.4.2022 ರಂದು ಸದರಿ ಎನ್‌ಪಿಎಸ್ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಪದ್ಧತಿಯನ್ನು ರಾಜ್ಯದ ಎಲ್ಲಾ ನೌಕರರಿಗೆ ರಾಜಸ್ಥಾನ ಸರಕಾರ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತು. ಇದರಲ್ಲಿ ದಿನಾಂಕ 1.4.2004 ರ ಬಳಿಕ ಸೇವೆಗೆ ಸೇರಿದ ನೌಕರರು ಒಳಗೊಂಡಿದ್ದರು.
ನೂತನ ಪಿಂಚಣಿ ಪದ್ಧತಿಯನ್ನು ಅನುಷ್ಠಾನಗೊಳಿಸಿದ ದಿನಾಂಕದಿಂದ ಇಲ್ಲಿಯವರೆಗೆ ಶೇಕಡ 90ರಷ್ಟು ನೌಕರರು ಹತ್ತು ವರ್ಷಗಳಿಗಿಂತಲೂ ಕಡಿಮೆ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದಾರೆ. ನೂತನ ಪಿಂಚಣಿ ಯೋಜನೆ ಅಡಿ ಸದರಿ ನೌಕರರಿಗೆ ಅವರ ವೇತನದ 14 ಶೇಕಡ ಹಣ ಸರಕಾರದ ವಂತಿಗೆ ರೂಪದಲ್ಲಿ ದೊರಕುತ್ತದೆ.
ಈ ಸೌಲಭ್ಯ ಹಳೆಯ ಪಿಂಚಣಿ ಯೋಜನೆ ಬರುವ ನೌಕರರಿಗೆ ಸಿಗುವುದಿಲ್ಲ. ಇದೀಗ ದಿನಾಂಕ 1.1.2004 ರಿಂದ ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಈಗಾಗಲೇ ಹತ್ತು ವರ್ಷಗಳಿಗಿಂತಲೂ ಕಡಿಮೆ ಅವಧಿಯ ಅರ್ಹತಾ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸರಕಾರಿ ನೌಕರರ ಪರಿಸ್ಥಿತಿ ಡೋಲಾಯಮಾನವಾಗಿದೆ. ಸರಕಾರದ ವಂತಿಗೆಯ ಹಣವನ್ನು ತನಗೆ ಮರಳಿಸುವಂತೆ ಸರಕಾರ ಕೇಳುತ್ತಿದೆ.
ನೂತನ ಪಿಂಚಣಿ ಯೋಜನೆಯ ಫಲಾನುಭವಿಗಳಾದ 90ರಷ್ಟು ನಿವೃತ್ತ ನೌಕರರು ಇದರಿಂದ ಕಂಗೆಟ್ಟಿದ್ದಾರೆ. 10 ವರ್ಷಗಳಿಗಿಂತಲೂ ಕಡಿಮೆ ಅವಧಿಯ ಸೇವೆ ಸಲ್ಲಿಸಿದ ಅಂತಹ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಅಡಿ ಯಾವುದೇ ಪಿಂಚಣಿ ಆಗಲಿ, ಉಪಾದಾನವಾಗಲಿ, ಸರಕಾರದ ವಂತಿಗೆಯ ಹಣವಾಗಲಿ ದೊರಕುವುದಿಲ್ಲ. ಇದರಿಂದ ಅವರ ನಿವೃತ್ತ ಬದುಕು ನರಕ ಸದೃಶವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪ್ರತಿ ತಿಂಗಳೂ ಪಿಂಚಣಿ ಪಡೆಯುತ್ತಿದ್ದವರಿಗೆ ದೊಡ್ಡ ಶಾಕ್ ಎದುರಾಗಿದೆ. ಆದುದರಿಂದ ಹಳೆಯ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಿ ತಮ್ಮ ನಿವೃತ್ತಿಯ ಬದುಕಿಗೆ ಕೊಳ್ಳಿ ಇಟ್ಟ ಎನ್‌ಪಿಎಸ್ ಹೋರಾಟಗಾರರ ವಿರುದ್ಧ ಶೇಕಡ 90ರಷ್ಟು ನಿವೃತ್ತ ಎನ್.ಪಿ.ಎಸ್. ನೌಕರರು ತಿರುಗಿ ಬಿದ್ದಿದ್ದಾರೆ.
ಪ್ರತಿಯೊಬ್ಬ ಸರಕಾರಿ ನೌಕರನಿಗೂ ಪಿಂಚಣಿ NPSನ ವೈಶಿಷ್ಟ್ಯತೆ
ಎನ್‌ಪಿಎಸ್‌ನಲ್ಲಿ ಸರಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬರಿಗೂ ಪಿಂಚಣಿ ದೊರಕುತ್ತದೆ. ಆದರೆ ಈ ಸೌಲಭ್ಯ ಹಳೆಯ ಪಿಂಚಣಿ ಯೋಜನೆ ಅಡಿ ಸೇವೆಗೆ ಸೇರಿದ ಸರಕಾರಿ ನೌಕರರಿಗೆ ದೊರಕುವುದಿಲ್ಲ. ಕೇವಲ ಒಂದು ವರ್ಷದೊಳಗಿನ ಸೇವೆ ಸಲ್ಲಿಸಿದ ನೌಕರನಿಗೆ ಕೂಡ ಪಿಂಚಣಿ ಸೌಲಭ್ಯ NPSನಲ್ಲಿ ದೊರಕುತ್ತದೆ.
ಎನ್ ಪಿ ಎಸ್ ಹೋರಾಟಗಾರರಿಗೆ ಉಭಯ ಸಂಕಟ
ದಿನಾಂಕ 1.4.2022 ರಿಂದ ನಿವೃತ್ತರಾದ ಸರಕಾರಿ ನೌಕರರಿಗೆ ಇದುವರೆಗೂ ಪಿಂಚಣಿ ದೊರಕದೇ ಇರುವುದು ಹಾಗೂ ಈಗಾಗಲೇ ನಿವೃತ್ತರಾದ ಸರಕಾರಿ ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವುದರಿಂದ ನಿವೃತ್ತ ನೌಕರರಿಗೆ ಆಗುವ ಆರ್ಥಿಕ ನಷ್ಟದ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸುವುದು ಎಂಬ ಬಗ್ಗೆ ಪರಿಹಾರೋಪಾಯಗಳು ಕಾಣದೆ ಎನ್ ಪಿ ಎಸ್ ಹೋರಾಟಗಾರರಿಗೆ ಉಭಯ ಸಂಕಟವಾಗಿದೆ. ಈ ಕುರಿತು ಸಧ್ಯಕ್ಕೆ ಯಾವುದೇ ಪರಿಹಾರ ಮಾರ್ಗ ಕಾಣುತ್ತಿಲ್ಲ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ
..