ಸುಖಾಸುಮ್ಮನೆ ಯಾರೂ ಪೊಲೀಸರನ್ನು ದೂರಲ್ಲ... ಮೊದಲು ನಿಮ್ಮವರನ್ನು ತಿದ್ದಿ: ವಕೀಲ ಎ.ಪಿ. ರಂಗನಾಥ್ ಆಕ್ರೋಶ
ಸುಖಾಸುಮ್ಮನೆ ಯಾರೂ ಪೊಲೀಸರನ್ನು ದೂರಲ್ಲ... ಮೊದಲು ನಿಮ್ಮವರನ್ನು ತಿದ್ದಿ: ವಕೀಲ ಎ.ಪಿ. ರಂಗನಾಥ್ ಆಕ್ರೋಶ
ಪೊಲೀಸರ ಮೇಲೆ ಆರೋಪ ಮಾಡುವವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂಬ ನಗರ ಪೊಲೀಸ್ ಆಯುಕ್ತರ ಹೇಳಿಕೆಯನ್ನು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ತೀವ್ರವಾಗಿ ಖಂಡಿಸಿದ್ದಾರೆ.
ಮೊದಲು, ಕ್ರಿಮಿನಲ್‌ಗಳ ಜೊತೆಗೆ ಸಹವಾಸ ಮಾಡೋದನ್ನು ಪೊಲೀಸ್ ಸಿಬ್ಬಂದಿಗೆ ಬಿಡಲು ಹೇಳಿ.. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂಸುವ ಬದಲು ರಿಯಲ್ ಎಸ್ಟೇಟ್ ದಂಧೆ, ಜೂಜು ಅಡ್ಡೆಗಳ ಜೊತೆಗೆ ಕೈಜೋಡಿಸುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ ಎಂದು ರಂಗನಾಥ್ ಆಗ್ರಹಿಸಿದರು.
ಪೊಲೀಸರ ಮೇಲೆ ಯಾರೂ ಸುಖಾಸುಮ್ಮನೆ ದೂರು ನೀಡುವುದಿಲ್ಲ. ಹಾಗೊಮ್ಮೆ ಸಾರ್ವಜನಿಕರಿಂದ ದೂರು ಕೇಳಿಬಂದರೂ ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಬೇಕು. ಅದನ್ನು ಬಿಟ್ಟು ಆರೋಪ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂಬ ಬೆದರಿಕೆಯ ಕ್ರಮ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಸ್ಥ ರಾಜಕಾರಣಿಗಳಿಗೆ ಮಣೆ ಹಾಕಿ, ಅವರ ಮಾತಿನಂತೆ ವಿರೋಧಿಗಳ ಹಾಗೂ ವಿರೋಧ ಪಕ್ಷಗಳ ಮುಖಂಡರ ಮೇಲೆ ರೌಡಿಶೀಟ್ ಹಾಕುವುದನ್ನು ನಿಲ್ಲಿಸಿ ಎಂದು ಕರೆ ನೀಡಿದ ಅವರು, ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಹೆಣ್ಣುಮಕ್ಕಳ ಮೇಲೆ ಹಾಡಹಗಲೇ ದೌರ್ಜನ್ಯವಾಗುತ್ತಿದೆ, ಅದನ್ನು ತಡೆಯುವತ್ತ ಗಮನಹರಿಸಿ ಎಂದು ಕುಟುಕಿದರು.
...