ವಕೀಲರ ಆಕ್ರೋಶಕ್ಕೆ ಮಣಿದ ಸರ್ಕಾರ: ಸದನದಲ್ಲಿ ಮಸೂದೆ ಮಂಡನೆಗೆ ಸಿಎಂ ಒಪ್ಪಿಗೆ
ವಕೀಲರ ಆಕ್ರೋಶಕ್ಕೆ ಮಣಿದ ಸರ್ಕಾರ: ಸದನದಲ್ಲಿ ಮಸೂದೆ ಮಂಡನೆಗೆ ಸಿಎಂ ಒಪ್ಪಿಗೆ
ರಾಜ್ಯಾದ್ಯಂತ ಭುಗಿಲೆದ್ದ ವಕೀಲರ ಆಕ್ರೋಶವನ್ನು ತಣಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮೀನ ಮೇಷ ಎಣಿಸುತ್ತಿದ್ದ ಬೊಮ್ಮಾಯಿ ಸರ್ಕಾರ ವಕೀಲರ ಆಕ್ರೋಶಕ್ಕೆ ಮಣಿದು ಕೊನೆಗೂ ಮಸೂದೆಯನ್ನು ಈ ಅಧಿವೇಶನದಲ್ಲೇ ಮಂಡಿಸುವುದಾಗಿ ಹೇಳಿದೆ.
ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಭರವಸೆ ನೀಡಿದ್ದಾರೆ.
ಸದನ ಸಮಿತಿ ಸಭೆಯಲ್ಲಿ ಮಸೂದೆ ಮಂಡಿಸುವ ಬಗ್ಗೆ ಒಪ್ಪಿಗೆ ಪಡೆಯಲಾಗುವುದು. ಸಿದ್ದರಾಮಯ್ಯ ಅವರ ಜೊತೆಗೂ ಸಭೆ ನಡೆಸಿ ಒಮ್ಮತದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂಬುದಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪ್ರಕಟಿಸಿದರು.
ಇದೇ ವೇಳೆ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ. ರಂಗನಾಥ್, ಕಾನೂನು ಸಚಿವ ಮಾಧುಸ್ವಾಮಿ ವಕೀಲರ ಕುರಿತು ಪೂರ್ವಗ್ರಹಪೀಡಿತರಾಗಿದ್ದಾರೆ. ವಕೀಲರನ್ನು ಬೆಳಿಗ್ಗೆಯಿಂದಲೇ ದಾರಿ ತಪ್ಪಿಸಲಾಗಿದೆ. ಸಿಎಂ ಬೊಮ್ಮಾಯಿ ಸೇರಿದಂತೆ ಬಹುತೇಕ ಸಚಿವರು ಮೋದಿ ಕಾರ್ಯಕ್ರಮದಲ್ಲಿ ಇದ್ದರು. ವಕೀಲರ ಸಂರಕ್ಷಣಾ ಕಾಯ್ದೆ ಮಂಡಿಸುವುದನ್ನು ನಿರ್ಲಕ್ಷಿಸಿದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಘೋಷಿಸಿದರು.
ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಯತ್ನ- ವಕೀಲರ ಬಂಧನ
ವಕೀಲರ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ವಕೀಲರು ವಿಧಾನಸೌಧ ಮುತ್ತಿಗೆ ಹಾಕುವ ಹೋರಾಟ ನಡೆಸಿದರು.
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ವಕೀಲರನ್ನು ಕೆ.ಆರ್. ವೃತ್ತದಲ್ಲಿ ಪೊಲೀಸರು ತಡೆದರು. ಈ ಸಂದರ್ಭದ ಪೊಲೀಸರು ಮತ್ತು ವಕೀಲರ ನಡುವೆ ಘರ್ಷಣೆ ಉಂಟಾಯಿತು.
ಇದೇ ವೇಳೆ, ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಂಕೀರ್ಣ ಆವರಣದಲ್ಲಿ ವಕೀಲರು ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಬಳಿಕ ಅವರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮೆರವಣಿಗೆ ಮೂಲಕ ಹೊರಟರು.
ಹೋರಾಟದ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಹೋರಾಟಗಾರರನ್ನು ಬಂಧಿಸಲಾಯಿತು. ಮೂವರು ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರ ಸಹಿತ 500ಕ್ಕೂ ಅಧಿಕ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರತಿಭಟನಾಕಾರರನ್ನು ಬಂಧಿಸಲಾಯಿತು.
..