![ಟ್ರಾಫಿಕ್ ಫೈನ್ ಚಿಂತೆ ಬಿಡಿ: ಶೇ. 50 ರಿಯಾಯಿತಿಯಲ್ಲಿ ದಂಡ ಕಟ್ಟಿ- ಇಲ್ಲಿದೆ ವಿವರ ಟ್ರಾಫಿಕ್ ಫೈನ್ ಚಿಂತೆ ಬಿಡಿ: ಶೇ. 50 ರಿಯಾಯಿತಿಯಲ್ಲಿ ದಂಡ ಕಟ್ಟಿ- ಇಲ್ಲಿದೆ ವಿವರ](https://i.ytimg.com/vi/pZu646bkxHU/hqdefault.jpg)
ಟ್ರಾಫಿಕ್ ಫೈನ್ ಚಿಂತೆ ಬಿಡಿ: ಶೇ. 50 ರಿಯಾಯಿತಿಯಲ್ಲಿ ದಂಡ ಕಟ್ಟಿ- ಇಲ್ಲಿದೆ ವಿವರ
ಟ್ರಾಫಿಕ್ ಫೈನ್ ಚಿಂತೆ ಬಿಡಿ: ಶೇ. 50 ರಿಯಾಯಿತಿಯಲ್ಲಿ ದಂಡ ಕಟ್ಟಿ- ಇಲ್ಲಿದೆ ವಿವರ
ಸಂಚಾರ ನಿಯಮ ಉಲ್ಲಂಘನೆ ಕುರಿತು ಟ್ರಾಫಿಕ್ ಪೊಲೀಸರು ಹಾಕಿರುವ ದಂಡದ ಮೊತ್ತ ಹೆಚ್ಚಾಗಿದೆಯೇ..? ಇನ್ನು ಈ ಚಿಂತೆ ಬಿಡಿ..
ರಾಜ್ಯ ಸಾರಿಗೆ ಇಲಾಖೆ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಫೆಬ್ರವರಿ 11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ನೀಡುವುದಾಗಿ ಗುರುವಾರ ಆದೇಶ ಹೊರಡಿಸಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಈ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ ನ್ಯಾಯಮೂರ್ತಿಯವರು, ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದೀರ್ಘ ಸಮಯದಿಂದ ಬಾಕಿ ಇರುವ ಪ್ರಕರಣಗಳಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಅಂತಿಮವಾಗಿ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರು.
ಈ ಮಹತ್ವದ ಆದೇಶದ ಪ್ರಕಾರ, ರಾಜ್ಯಾದೆಲ್ಲೆಡೆ ವಿವಿಧ ಪ್ರದೇಶದ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕೆ ಸುಲಭ ದಾರಿ ಉಂಟಾಗಿದೆ. ಈ ಪ್ರಕರಣಗಳ ದಂಡದ ಮೊತ್ತವನ್ನು ಶೇ.50ಕ್ಕೆ ಇಳಿಸುವ ಅಥವಾ ಅರ್ಧದಷ್ಟು ದಂಡದ ಮೊತ್ತದಲ್ಲಿ ವಿನಾಯಿತಿ ನೀಡಲಾಗುವುದು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಬಳಿಕ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.
ದೀರ್ಘ ಸಮಯದಿಂದ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ದಂಡವನ್ನು ಫೆಬ್ರವರಿ 11ರ ಒಳಗೆ ಪಾವತಿಸಿದರೆ ಮಾತ್ರ ಶೇಕಡಾ 50ರ ವಿನಾಯಿತಿ ಸಿಗಲಿದೆ. ನಿಗದಿತ ದಿನಾಂಕದ ಒಳಗೆ ದಂಡ ಪಾವತಿ ಮಾಡಿ ಪ್ರಕರಣ ಇತ್ಯರ್ಥ ಮಾಡುವವರಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ.
ಆದರೆ, ನಿಗದಿತ ದಿನಾಂಕದ ಬಳಿಕ ದಂಡದ ಮೊತ್ತದಲ್ಲಿ ಯಾವುದೇ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈಗಿರುವ ಅಂದಾಜು ಪ್ರಕಾರ, ಬೆಂಗಳೂರು ನಗರ ಸಂಚಾರ ಪೊಲೀಸ್ ವ್ಯಾಪ್ತಿಯಲ್ಲೇ ಸುದೀರ್ಘ ಸಮಯದಿಂದ ಅಂದಾಜು 2 ಕೋಟಿಯಷ್ಟು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.
ಈ ಅವಕಾಶವನ್ನು ಬಳಸಿ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ. ಆನ್‌ಲೈನ್‌ನಲ್ಲಿ ಅಥವಾ ತಮ್ಮ ಸಮೀಪದ ಸಂಚಾರ ಪೊಲೀಸ್ ಸ್ಟೇಷನ್‌ಗಳಲ್ಲಿ ದಂಡದ ಮೊತ್ತವನ್ನು ಪಾವತಿಸಿ ಈ ಆದೇಶದ ಲಾಭ ಪಡೆಯವಂತೆ ವಿನಂತಿಸಲಾಗಿದೆ.