ನ್ಯಾಯದೇಗುಲ ಎಲ್ಲರಿಗೂ ಸಮಾನ, ಇತರ ಜಾಮೀನು ಅರ್ಜಿಗಳನ್ನೂ ರಾತೋರಾತ್ರಿ ಪಟ್ಟಿ ಮಾಡಿ: ಹೈಕೋರ್ಟ್‌ಗೆ ವಕೀಲರ ಪತ್ರ
ನ್ಯಾಯದೇಗುಲ ಎಲ್ಲರಿಗೂ ಸಮಾನ, ಇತರ ಜಾಮೀನು ಅರ್ಜಿಗಳನ್ನೂ ರಾತೋರಾತ್ರಿ ಪಟ್ಟಿ ಮಾಡಿ: ಹೈಕೋರ್ಟ್‌ಗೆ ವಕೀಲರ ಪತ್ರ
ಭ್ರಷ್ಟಾಚಾರ ಪ್ರಕರಣ: ಶಾಸಕನ ನಿರೀಕ್ಷಣಾ ಜಾಮೀನು ಪಟ್ಟಿ ಮಾಡಿದ ಹೈಕೋರ್ಟ್ ನಡೆಗೆ ವಕೀಲರ ಆಕ್ರೋಶ
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೋಟ್ಯಂತರ ಮೊತ್ತದ ಲಂಚ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನನ್ನು ಒಂದೇ ದಿನದಲ್ಲಿ ಪಟ್ಟಿ ಮಾಡಿದ ಕರ್ನಾಟಕ ಹೈಕೋರ್ಟ್ ಕ್ರಮಕ್ಕೆ ವಕೀಲರ ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ವಕೀಲರ ಸಂಘ ಈ ಬೆಳವಣಿಗೆಯನ್ನು ಖಂಡಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಹೈಕೋರ್ಟ್ ಸಿಜೆ ಪ್ರಸನ್ನ ಬಾಲಚಂದ್ರ ವರಾಳೆ ಅವರಿಗೆ ಪತ್ರ ಬರೆದಿದ್ದು, ಇದರಲ್ಲಿ ವಕೀಲರ ಸಮುದಾಯದ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.
ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪಟ್ಟಿ ಮಾಡಲು ಹೈಕೋರ್ಟ್‌ನಲ್ಲಿ ವಾರಗಟ್ಟಲೆ ಅವಧಿ ಹಿಡಿಯುತ್ತದೆ. ಆದರೆ, ಅತಿ ಗಣ್ಯ ವ್ಯಕ್ತಿಗಳ ಅರ್ಜಿಗಳನ್ನು ರಾತೋರಾತ್ರಿ ಪಟ್ಟಿ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಚುಚ್ಚಿರುವ ಬೆಂಗಳೂರು ವಕೀಲರ ಸಂಘ, ಇತರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನೂ ಒಂದೇ ದಿನದಲ್ಲಿ ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಬೆಂಗಳೂರು ವಕೀಲರ ಸಂಘ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.
ನ್ಯಾಯದೇಗುಲ ಎಲ್ಲರಿಗೂ ಸಮಾನ. ವಿಐಪಿಗಳ ಜಾಮೀನು ಅರ್ಜಿಗಳನ್ನು ಇತ್ಯರ್ಥ ಮಾಡಿದಂತೆ ಇತರ ಜಾಮೀನು ಅರ್ಜಿಗಳನ್ನೂ ರಾತೋರಾತ್ರಿ ಪಟ್ಟಿ ಮಾಡಿ ಎಂದು ಎಎಬಿ ವತಿಯಿಂದ ಹೈಕೋರ್ಟ್‌ಗೆ ಸಲ್ಲಿಸಲಾದ ಪತ್ರದಲ್ಲಿ ತಿಳಿಸಿದ್ದಾರೆ.
ವಿರೂಪಾಕ್ಷ ಅವರ ಜಾಮೀನು ಅರ್ಜಿಯನ್ನು ರಾತೋರಾತ್ರಿ ಪಟ್ಟಿ ಮಾಡಿ ಒಂದೇ ದಿನದಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿರುವ ಹೈಕೋರ್ಟ್ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ ಬರೆದ ಪತ್ರ ಮತ್ತಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.