ಆಕ್ಷೇಪಣೆ ಪರಿಹರಿಸಲು ವಿಳಂಬ: ದಂಡವಾಗಿ "ವಕೀಲರೊಬ್ಬರ ವಗೈರೆಗಳು" ಪುಸ್ತಕ ನೀಡಲು ಹೈಕೋರ್ಟ್ ಆದೇಶ
ಆಕ್ಷೇಪಣೆ ಪರಿಹರಿಸಲು ವಿಳಂಬ: ದಂಡವಾಗಿ "ವಕೀಲರೊಬ್ಬರ ವಗೈರೆಗಳು" ಪುಸ್ತಕ ನೀಡಲು ಹೈಕೋರ್ಟ್ ಆದೇಶ
ಭೂಸ್ವಾಧೀನ ಪ್ರಕರಣವೊಂದರಲ್ಲಿ ತಕರಾರು ಅರ್ಜಿಗೆ ಕಚೇರಿ ಎತ್ತಿದ್ದ ಆಕ್ಷೇಪಣೆ ಪರಿಹರಿಸಲು ವಿಳಂಬ ಮಾಡಿದ ಅರ್ಜಿದಾರರೊಬ್ಬರಿಗೆ ಹಣದ ರೂಪದಲ್ಲಿ ದಂಡ ಕಟ್ಟುವ ಬದಲು ಪುಸ್ತಕ ರೂಪದಲ್ಲಿ ದಂಡ ನೀಡುವಂತೆ ಹೈಕೋರ್ಟ್ ತಾಕೀತು ಮಾಡಿದೆ.
ಹಿರಿಯ ವಕೀಲರಾದ ಸಿ.ಎಚ್. ಹನುಮಂತ ರಾಯ ಅವರು ಬರೆದಿರುವ 'ವಕೀಲರೊಬ್ಬರ ವಗೈರೆಗಳು' ಪುಸ್ತಕರವನ್ನು ದಂಡ ರೂಪದಲ್ಲಿ ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ ನೀಡುವಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ.
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದ್ದು, ತುಮಕೂರಿನ ಮಹಾಲಕ್ಷ್ಮಮ್ಮ ಮತ್ತು ಜಿ. ಮಂಗಳಾ ಎಂಬವರು ಪ್ರಕರಣದಲ್ಲಿ ಅರ್ಜಿದಾರರಾಗಿದ್ದರು.
ಜೊತೆಗೆ, ಕಚೇರಿ ಆಕ್ಷೇಪಣೆಯನ್ನು ಒಂದು ವಾರದೊಳಗೆ ಪರಿಹರಿಸುವಂತೆ ಸೂಚಿಸಲಾಗಿದೆ. ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಮ್ಮ ಮತ್ತು ಜಿ. ಮಂಗಳಾ 2022ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತು ಹೈಕೋರ್ಟ್ ಕಚೇರಿಯು ಕೆಲ ಆಕ್ಷೇಪಣೆಗಳನ್ನು ಎತ್ತಿತ್ತು. ಇದನ್ನು ಪರಿಹರಿಸಲು ಅರ್ಜಿದಾರರು ವಿಳಂಬ ಮಾಡಿದ್ದರು. ಇದರಿಂದ ಅರ್ಜಿಯು ಮಾನ್ಯತೆ ಕಳೆದುಕೊಂಡಿತ್ತು.
ಅರ್ಜಿಯನ್ನು ಪುನರ್‌ಸ್ಥಾಪಿಸಲು ಕೋರಲಾದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಒಂದು ವಾರದೊಳಗೆ ಕಚೇರಿ ಆಕ್ಷೇಪಣೆ ಪ್ರಕ್ರಿಯೆಯನ್ನು ಪೂರೈಸುವಂತೆ ಆದೇಶಿಸಿದೆ.