ಮಕ್ಕಳ ರಕ್ಷಣಾ ಆಯೋಗಕ್ಕೆ ವ್ಯಾಜ್ಯ ಇತ್ಯರ್ಥ ಮಾಡುವ, ಭೇಟಿಗೆ ಅವಕಾಶ ಕಲ್ಪಿಸುವ ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್
ಮಕ್ಕಳ ರಕ್ಷಣಾ ಆಯೋಗಕ್ಕೆ ವ್ಯಾಜ್ಯ ಇತ್ಯರ್ಥ ಮಾಡುವ, ಭೇಟಿಗೆ ಅವಕಾಶ ಕಲ್ಪಿಸುವ ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್
ಪಾಲಕರಿಗೆ ಮಗುವನ್ನು ಭೇಟಿ ಮಾಡುವ ಅವಕಾಶ ಕಲ್ಪಿಸುವ ಅಧಿಕಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮ ಆರೈಕೆ ಮತ್ತು ಪೋಷಣೆಯಲ್ಲಿ ಇರುವ ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ಕಲ್ಪಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜ್ಯೋತಿ ಮೂಲಿಮನಿ ಅವರ ನೇತೃತ್ವದ ಪೀಠ ಇತ್ಯರ್ಥಪಡಿಸಿತು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಒಂದು ಸಲಹಾ ಸಂಸ್ಥೆ ಮಾತ್ರ. ಅದು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ನೀತಿ ನಿರ್ಧಾರ ರೂಪಿಸಲು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಬಹುದು. ಆದರೆ, ಯಾವುದೇ ತೀರ್ಪು ನೀಡುವ ಅಥವಾ ಪಕ್ಷಗಾರರ ನಡುವಿನ ವ್ಯಾಜ್ಯವನ್ನು ನಿರ್ಣಯಿಸುವ ಅಧಿಕಾರ ಹೊಂದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಘಟನೆಯ ವಿವರ
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 2003ರಲ್ಲಿ ಮದುವೆಯಾಗಿದ್ದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. 2010ರಲ್ಲಿ ಆ ದಂಪತಿಗೆ ಗಂಡು ಮಗು ಜನಿಸಿತ್ತು. 2016ರಲ್ಲಿ ಪತ್ನಿ ಪತಿಯ ವಿರುದ್ಧ ಹಲ್ಲೆ ನಡೆಸಿದ್ದಾರೆ ಎಂದು ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪತ್ನಿ ತನ್ನ ಮಗುವಿನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು.
2017ರ ಜನವರಿಯಲ್ಲಿ ಶಾಲೆಯಲ್ಲಿ ಇದ್ದ ಮಗುವನ್ನು ಪತಿ ತಮ್ಮೊಂದಿಗೆ ಕರೆದೊಯ್ದಿದ್ದರು. ಇದರಿಂದ ಪತಿಯಿಂದ ಮಗುವಿನ ರಕ್ಷಣೆ ಕೋರಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ತಾಯಿ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ್ದ ಆಯೋಗ, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.