ವಿವಾಹಿತ ಪುರುಷರಿಗೂ ಬೇಕು ಆಯೋಗ: ಸುಪ್ರೀಂ ಕೋರ್ಟ್‌ಗೆ ವಕೀಲರೊಬ್ಬರ ಅರ್ಜಿ
ವಿವಾಹಿತ ಪುರುಷರಿಗೂ ಬೇಕು ಆಯೋಗ: ಸುಪ್ರೀಂ ಕೋರ್ಟ್‌ಗೆ ವಕೀಲರೊಬ್ಬರ ಅರ್ಜಿ
ದೇಶದಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ಪುರುಷರ ಆಯೋಗ ರಚನೆ ಮಾಡಲು ಅವಕಾಶ ನೀಡಬೇಕು ಎಂದು ನ್ಯಾಯವಾದಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.
ದೇಶದಲ್ಲಿ ಕೌಟುಂಬಿಕ ದೌರ್ಜನ್ಯದಿಂದಾಗಿ 81,063 ಮಂದಿ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ವಿವಾಹಿತ ಮಹಿಳೆಯರ ಸಂಖ್ಯೆ 28,680. 2021ರ ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ ನೀಡಿದ ಅಧಿಕೃತ ದಾಖಲೆ ಇದಾಗಿದ್ದು, ಇದನ್ನು ಪರಿಗಣಿಸಿ ಪುರುಷರ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕಿದೆ ಎಂದು ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಶೇ. 33.2ರಷ್ಟು ಮಂದಿ ಪುರುಷರು ಕೌಟುಂಬಿಕ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆ ಮಾಡುತ್ತಿದ್ದಾರೆ ಎಂದು ವಕೀಲರಾದ ಮಹೇಶ್ ಕುಮಾರ್ ತಿವಾರಿ ನ್ಯಾಯಪೀಠದ ಮುಂದೆ ವಾದಿಸಿದ್ದಾರೆ.
ಪುರುಷರು ನೀಡುವ ದೂರುಗಳನ್ನು ಸ್ವೀಕರಿಸಿ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸ್ ಠಾಣೆ ಮತ್ತು ಇತರ ಸಕ್ಷಮ ಪ್ರಾಧಿಕಾರಗಳು ಕೂಡ ಪುರುಷರು ನೀಡುವ ದೂರುಗಳನ್ನು ಸ್ವೀಕರಿಸಲು ಸೂಕ್ತ ಆದೇಶ ಹೊರಡಿಸಬೇಕು. ಈ ಬಗ್ಗೆ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.