ಖೈದಿಯ ಆರೋಗ್ಯ, ಭದ್ರತೆ ಸರ್ಕಾರದ ಕರ್ತವ್ಯ- ಜೈಲಿನಲ್ಲಿ ಖೈದಿ ಸಾವು: ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ
ಖೈದಿಯ ಆರೋಗ್ಯ, ಭದ್ರತೆ ಸರ್ಕಾರದ ಕರ್ತವ್ಯ- ಜೈಲಿನಲ್ಲಿ ಖೈದಿ ಸಾವು: ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ
ವಿಚಾರಣಾಧೀನ ಖೈದಿಗಳು ಸೇರಿದಂತೆ ಜೈಲಿನಲ್ಲಿ ಇರುವ ಬಂಧಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಜೈಲು ಅಧಿಕಾರಿಗಳು ಚಿಕಿತ್ಸೆ ನಿರಾಕರಿಸಿದ ಕಾರಣ ವಿಚಾರಣಾಧೀನ ಖೈದಿಯೊಬ್ಬ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅನುಜಾ ಪ್ರಭು ದೇಸಾಯಿ ಮತ್ತು ಆರ್.ಎಂ. ಜೋಷಿ ನೇತೃತ್ವದ ನ್ಯಾಯಪೀಠ, ಮೃತ ಖೈದಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.
ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಯಾ ವಿಚಾರಣೆ ಎದುರಿಸುತ್ತಿರುವ ಖೈದಿಗಳಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು, ಖೈದಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಅವರನ್ನು ಮಾನವ ಘನತೆಯಿಂದ ನಡೆಸಿಕೊಳ್ಳಬೇಕಾಗಿದೆ. ಈ ಕರ್ತವ್ಯದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ, ಮೃತರ ಪೋಷಕರು, ಪತ್ನಿ ಮತ್ತು ಮಕ್ಕಳು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಮೃತ ವಿಚಾರಣಾಧೀನ ಖೈದಿಯವರಿಗೆ ಸದ್ರಿ ಪ್ರಕರಣದ ಹೊರತಾಗಿ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಗಂಭೀರ ಸ್ವರೂಪದ ಅಪರಾಧ ಎಸಗಿ ಕಠಿಣ ಶಿಕ್ಷೆ ಅನುಭವಿಸುತ್ತಿರಲಿಲ್ಲ. ಅಲ್ಲದೆ, ಅವರೊಬ್ಬ 32 ವರ್ಷದ ಯುವಕನಾಗಿದ್ದು, ಪತ್ನಿ, ಮಕ್ಕಳು ಮತ್ತು ಆತನ ಪೋಷಕರು ಆತನ ಮೇಲೆ ಅವಲಂಬಿತರಾಗಿದ್ದರು.
ಜೈಲಾಧಿಕಾರಿಗಳು ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಖೈದಿ ಸಾವನ್ನಪ್ಪಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತನಾದ ಖೈದಿಗೆ ಸಂವಿಧಾನದ 21ನೇ ವಿಧಿಯಡಿ ಒದಗಿಸಬೇಕಾದ ಆರೋಗ್ಯದ ಹಕ್ಕನ್ನು ಯಾರೂ ಕಸಿದುಕೊಳ್ಳುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.