2750 ಎಕರೆ ಸರ್ಕಾರಿ ಭೂಮಿ ಅಕ್ರಮ ಮಂಜೂರು: ಶಾಸಕ ಸಹಿತ ಏಳು ತಹಶೀಲ್ದಾರ್ ವಿರುದ್ಧ ತನಿಖೆಗೆ ಕೋರ್ಟ್ ನಿರ್ದೇಶನ
2750 ಎಕರೆ ಸರ್ಕಾರಿ ಭೂಮಿ ಅಕ್ರಮ ಮಂಜೂರು: ಶಾಸಕ ಸಹಿತ ಏಳು ತಹಶೀಲ್ದಾರ್ ವಿರುದ್ಧ ತನಿಖೆಗೆ ಕೋರ್ಟ್ ನಿರ್ದೇಶನ
2016ದಿಂದ 2022ರ ಅವಧಿಯಲ್ಲಿ ಸುಮಾರು 775 ಕೋಟಿ ರೂಪಾಯಿ ಮೌಲ್ಯದ 2750 ಎಕರೆ ಸರ್ಕಾರಿ ಭೂಮಿ ಅಕ್ರಮ ಮಂಜೂರು ಮಾಡಿರುವ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಲಿಂಗೇಶ್ ಸೇರಿದಂತೆ ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಏಳು ತಹಶೀಲ್ದಾರ್‌ಗಳ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ನಿರ್ದೇಶನ ಹೊರಡಿಸಿದೆ.
ಭೂ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್ ಮತ್ತು ತಹಶೀಲ್ದಾರ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದ ಎ. ಜಗದೀಶ್, ಎಚ್.ಎಸ್. ಪರಮೇಶ್, ಜೆ. ಉಮೇಶ್, ಬಿ.ಎಸ್. ಪುಟ್ಟಶೆಟ್ಟಿ, ಯು.ಎಂ. ಮೋಹನ್ ಕುಮಾರ್ ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ತನಿಖೆಗೆ ನಿರ್ದೇಶಿಸಲಾಗಿದೆ.
ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ. ಪ್ರೀತ್ ಈ ಆದೇಶ ಹೊರಡಿಸಿದ್ದು, ಜುಲೈ 7ರೊಳಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ಹೊರಡಿಸಲಾಗಿದೆ.
ತಾಲೂಕು ಭೂ ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾದ ಕೆ.ಎಸ್. ಲಿಂಗೇಶ್ ಹಾಗೂ ಸದಸ್ಯರಾದ ಜಿ.ಕೆ. ಕುಮಾರ್, ಶೈಲಾ ಮೋಹನ್, ಟಿ.ಆರ್. ರಮೇಶ್, ಪರ್ವತೇಗೌಡ, ಎಂ.ಆರ್. ಚೇತನ, ಈಶ್ವರ ಪ್ರಸಾದ್, ಎಸ್.ಎನ್. ಲಿಂಗೇಶ್, ರಂಗನಾಥ್ ಮತ್ತು ಭಾಗ್ಯಮ್ಮ ಆರೋಪಿತ ಪಟ್ಟಿಯಲ್ಲಿದ್ದಾರೆ. ಈ ಆರೋಪಿಗಳು ಅರ್ಜಿದಾರರ ನೈಜತೆ ಪರಿಶೀಲಿಸದೆ ಬೇಕಾಬಿಟ್ಟಿ ಭೂಮಿ ಹಂಚಿಕೆ ಮಾಡಿದ್ದಾರೆ.
ಭೂಮಿ ಮಂಜೂರಾತಿ ಮತ್ತು ಸಕ್ರಮಕ್ಕೆ ನಮೂನೆ 53ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳೂ ನಾಪತ್ತೆಯಾಗಿವೆ. ಬೇಲೂರು ಪಟ್ಟಣ ವ್ಯಾಪ್ತಿಯಲ್ಲೂ ಅಕ್ರಮ ಭೂಮಿ ಮಂಜೂರು ಮಾಡಲಾಗಿದೆ. ಈ ಹಗರಣದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ದೂರುದಾರರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಮಂಜೂರಾದ ಅರ್ಜಿದಾರರ ಪೈಕಿ 1260 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗಿದೆ. 1260 ಅರ್ಜಿದಾರರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಇವುಗಳ ಪೈಕಿ ಬಹುತೇಕ ಭೂ ಮಂಜೂರಾಇ ಪ್ರಕ್ರಿಯೆಗಳು ಅಧಿಕಾರಿಗಳು ಮತ್ತು ಭೂ ಮಂಜೂರಾತಿ ಸಮಿತಿ ಅಧ್ಯಕ್ಷ, ಸದಸ್ಯ ಕಾರ್ಯದರ್ಶಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಕಲಿ ಹಾಗೂ ಸುಳ್ಳು ದಾಖಲೆ ಸೃಷ್ಟಿಸಿ ನೌಕರರು ಸರ್ಕಾರಕ್ಕೆ ಮಹಾದ್ರೋಹ ಎಸಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರುದಾರರು ಮಾನ್ಯ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದ್ದರು.
.