ಚೆಕ್ ಅಮಾನ್ಯ ಪ್ರಕರಣ: ಆರೋಪಿ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲ: ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ಆರೋಪಿ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲ: ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿ ಗೈರುಹಾಜರಿ ಸಂದರ್ಭದಲ್ಲಿ ಏಕಪಕ್ಷೀಯವಾಗಿ ವಿಚಾರಣೆ ಮುಂದುವರೆಸಲು ಹಾಗೂ ಆರೋಪಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಒಂದು ವೇಳೆ, ಸಮ್ಮನ್ಸ್ ಜಾರಿ ನಂತರವೂ ಆರೋಪಿ ಗೈರು ಹಾಜರಾದರೆ, ಆಗ ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಿರುವ ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೀರ್ಪು ನೀಡಿರುವ ನ್ಯಾಯಪೀಠ, ಪ್ರಕರಣವನ್ನು ಏಕಪಕ್ಷೀಐ ಎಂದು ಘೋಷಿಸಿ ವಿಚಾರಣೆಯ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಸ್. ಎಚ್. ಕುಮಾರ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಉಡುಪಿ ಜೆಎಂಎಫ್‌ಸಿ ನ್ಯಾಯಾಲಯ ತಮಗೆ ವಿಧಿಸಿರುವ ಶಿಕ್ಷೆ ಹಾಗೂ ಅದನ್ನು ಎತ್ತಿ ಹಿಡಿದಿರುವ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಶಿವಮೊಗ್ಗದ ಅಬ್ದುಲ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಪಿಟಿಷನ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅಗತ್ಯ ಕಾನೂನು ಪ್ರಕ್ರಿಯೆ ಅನುಸರಿಸದೆ ಉಡುಪಿ JMFC ನ್ಯಾಯಾಲಯ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದೆ. ಉಡುಪಿ ಸೆಷನ್ಸ್ ಕೋರ್ಟ್ ಕೂಡ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಶೀಲಿಸದೇ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಅರ್ಥೈಸುವಲ್ಲೂ ವಿಚಾರಣಾ ನ್ಯಾಯಾಲಯ ವಿಫಲವಾಗಿವೆ ಎಂದು ಹೈಕೋರ್ಟ್ ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 299ರಲ್ಲಿ ಹೇಳಲಾದ ಪರಿಸ್ಥಿತಿಯನ್ನು ಹೊರತುಪಡಿಸಿ ಸೆಕ್ಷನ್ 273ರ ಪ್ರಕಾರ ಪ್ರಕರಣದ ಆರೋಪಿಯ ಸಮ್ಮುಖದಲ್ಲೇ ವಿಚಾರಣೆಯ ಪ್ರಕ್ರಿಯೆ ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಲಾಘಿದೆ. ಒಂದೋ ಆರೋಪಿ, ಇಲ್ಲವೇ ಆತನ ಗೈರು ಹಾಜರಿಯಲ್ಲಿ ಅವರ ಪರ ವಕೀಲರು ಉಪಸ್ಥಿತರಿರಬೇಕು. ಇಬ್ಬರ ಗೈರು ಹಾಜರಿಯಲ್ಲಿ ನ್ಯಾಯಾಲಯ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಲು ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸದ್ರಿ ಕೈಯಲ್ಲಿರುವ ಪ್ರಕರಣದಲ್ಲಿ ಆರೋಪಿ ವಿಚಾರಣಾ ನ್ಯಾಯಾಲಯದಲ್ಲಿ ಆ ದಿನ ಗೈರು ಹಾಜರಾಗಿದ್ದಾರೆ. ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಕ್ರಮಕ್ಕೆ ಮುಂದಾಗಿಲ್ಲ. ಇಲ್ಲಿ ಸುಪ್ರೀಂಕೋರ್ಟ್ ತೀರ್ಪುಗಳನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅದನ್ನು ಬಿಟ್ಟು, ಸೂಕ್ತ ಕಾನೂನಿನ ಪ್ರಕ್ರಿಯೆಯನ್ನು ಅನುಸರಿಸದೆ ಆರೋಪಿಯಾಗಿರುವ ಅರ್ಜಿದಾರರಿಗೆ ಶಿಕ್ಷೆ ವಿಧಿಸಿರುವುದುದ ಸರಿಯಲ್ಲ. ಹಾಗಾಗಿ, ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಪಡಿಸಲು ಯೋಗ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
ಉಡುಪಿ ನಿವಾಸಿ ಮೊಹಮ್ಮದ್ ಇಕ್ಬಾಲ್ ಶಿವಮೊಗ್ಗದ ಆಗುಂಬೆ ನಿವಾಸಿ ಅಬ್ದುಲ್ ಎಂಬವರ ಮೇಲೆ 6 ಚೆಕ್ ಅಮಾನ್ಯ ಪ್ರಕರಣಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಸಿವಿಲ್ ಮತ್ತು JMFC ನ್ಯಾಯಾಲಯ ಆರೋಪಿ ಗೈರು ಹಾಜರಿಯಲ್ಲಿ ವಿಚಾರಣೆ ಮುಗಿಸಿ ಶಿಕ್ಷೆ ವಿಧಿಸಿತ್ತು.
ಈ ಆದೇಶವನ್ನು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಪುರಸ್ಕರಿಸಿತ್ತು. ಸೆಷನ್ಸ್ ಕೋರ್ಟ್ ನ ತೀರ್ಪು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.