ಕೋರ್ಟ್ ಆದೇಶ ಧಿಕ್ಕರಿಸಿದ ತಹಶೀಲ್ದಾರ್, ಪಿಡಿಓಗೆ ಜೈಲು ಶಿಕ್ಷೆ: ಹೈಕೋರ್ಟ್ ಆದೇಶ
ಕೋರ್ಟ್ ಆದೇಶ ಧಿಕ್ಕರಿಸಿದ ತಹಶೀಲ್ದಾರ್, ಪಿಡಿಓಗೆ ಜೈಲು ಶಿಕ್ಷೆ: ಹೈಕೋರ್ಟ್ ಆದೇಶ
ಕೋರ್ಟ್ ಆದೇಶವನ್ನು ಧಿಕ್ಕರಿಸಿ ಮನೆಯನ್ನು ತೆರವು ಮಾಡುವ ಕಾರ್ಯಾಚರಣೆ ಮಾಡಿದ ಕುಣಿಗಲ್ ತಹಶೀಲ್ದಾರ್, ಹುಲಿಯೂರು ದುರ್ಗ ಪಿಡಿಓಗೆ ಎರಡು ತಿಂಗಳ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಕೋರ್ಟ್ ಆದೇಶ ಇದ್ದರೂ ಮನೆ ತೆರವು ಮಾಡಿರುವ ತಹಶೀಲ್ದಾರ್ ಹಾಗೂ ಮತ್ತೊಬ್ಬ ಅಧಿಕಾರಿ ವಿರುದ್ಧ ಸಂತ್ರಸ್ತ 12 ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ವೆಂಕಟೇಶ್ ನಾಯಕ್ ಅವರಿದ್ದ ನ್ಯಾಯಪೀಠ, ಅಧಿಕಾರಿಗಳಿಗೆ ಜೈಲು ಶಿಕ್ಷೆಯ ತೀರ್ಪು ವಿಧಿಸಿದೆ.
ಘಟನೆಯ ವಿವರ:
2011ರಲ್ಲಿ ಹುಲಿಯೂರು ದುರ್ಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಅಗಲೀಕರಣಕ್ಕೆ ಸರ್ಕಾರ ಮನೆಗಳ ತೆರವು ಮಾಡುವ ಕ್ರಮಕ್ಕೆ ಮುಂದಾಗಿತ್ತು. ಈ ಬಗ್ಗೆ ಸಂತ್ರಸ್ತರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ತೆರವು ಕಾರ್ಯಾಚರಣೆ ಮಾಡುವ ಮುನ್ನ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಮುಗಿಸಬೇಕು ಹಾಗೂ ಒತ್ತುವರಿದಾರರು ಇದ್ದಲ್ಲಿ ಅವರಿಗೆ ನೋಟೀಸ್ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೈಕೋರ್ಟ್ 2012ರ ಜೂನ್ 22ರಂದು ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಧಿಕ್ಕರಿಸಿ ತಹಶೀಲ್ದಾರ್ ನೇತೃತ್ವದಲ್ಲಿ 2017ರಲ್ಲಿ ಕೆಲವು ಮನೆಗಳನ್ನು ತೆರವುಗೊಳಿಸಲಾಗಿತ್ತು. ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು.