ಹೈಕೋರ್ಟ್ ನ್ಯಾಯಪೀಠದಲ್ಲಿ ವಕೀಲರು ಮತ್ತು ಜಿಲ್ಲಾ ನ್ಯಾಯಾಂಗದ ಪಾಲು ಎಷ್ಟು...?- ಸುಪ್ರೀಂ ಕೋರ್ಟ್‌ನ ನಿಲುವೇನು..?
ಹೈಕೋರ್ಟ್ ನ್ಯಾಯಪೀಠದಲ್ಲಿ ವಕೀಲರು ಮತ್ತು ಜಿಲ್ಲಾ ನ್ಯಾಯಾಂಗದ ಪಾಲು ಎಷ್ಟು...?- ಸುಪ್ರೀಂ ಕೋರ್ಟ್‌ನ ನಿಲುವೇನು..?
ಒಟ್ಟು ನ್ಯಾಯಾಧೀಶರ ಪೈಕಿ ಕನಿಷ್ಟ ಮೂರನೇ ಒಂದರಷ್ಟು ನ್ಯಾಯಾಧೀಶರು ಜಿಲ್ಲಾ ನ್ಯಾಯಾಂಗದಿಂದ ಸೇವಾ ಕೋಟಾದಡಿ ಹೈಕೋರ್ಟ್‌ಗೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಉಳಿದ ಮೂರನೇ ಎರಡಷ್ಟು ಭಾಗ ಬಾರ್‌ನಿಂದ ಅಂದರೆ ವಕೀಲ ಸಮುದಾಯದಿಂದ ಪಡೆಯಬೇಕು ಎಂಬ ನಿಯಮವನ್ನು ಕಾಯ್ದುಕೊಳ್ಳಬೇಕು ಮತ್ತು ಅನುಸರಿಸಬೇಕು ಎಂದು ಅದು ತನ್ನ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಎಲ್ಲಾ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಯನ್ನು ಕೇಳಿದೆ.
ಪ್ರಸ್ತುತ ಪದ್ಧತಿಯ ಪ್ರಕಾರ, ವೃತ್ತಿಪರ ವಕೀಲರಾಗಿ ಸೇವೆ ಸಲ್ಲಿಸುತ್ತಿರುವವರು ಹೈಕೋರ್ಟಿನ ಮೂರನೇ ಎರಡರಷ್ಟು ನ್ಯಾಯಮೂರ್ತಿಗಳ ಸ್ಥಾನವನ್ನು ಅಲಂಕರಿಸುತ್ತಾರೆ. ಉಳಿದ ಮೂರನೇ ಒಂದು ಅಂಶ ನ್ಯಾಯಾಧೀಶರ ಹುದ್ದೆಗಳು ನ್ಯಾಯಾಂಗ ಸೇವೆಗಳಿಂದ ಮೇಲ್ದರ್ಜೆಗೇರಿ ಈ ಸ್ಥಾನವನ್ನು ಅಲಂಕರಿಸುತ್ತಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಮತ್ತು ವರ್ಗಾವಣೆಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಶಿಫಾರಸುಗಳನ್ನು ಮಾಡುವಾಗ ಈ ಅನುಪಾತವನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದೆ.
50 ರಷ್ಟು ಹೈಕೋರ್ಟ್ ನ್ಯಾಯಾಧೀಶರನ್ನು ಸೇವಾ ಕೋಟಾದಿಂದ ಅಂದರೆ ನ್ಯಾಯಾಂಗ ಸೇವೆಗಳು ಅಥವಾ ಜಿಲ್ಲಾ ನ್ಯಾಯಾಂಗದಿಂದ ನೇಮಕ ಮಾಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಈ ವಿಚಾರದಲ್ಲಿ ಕೇಂದ್ರ ಕಾನೂನು ಸಚಿವಾಲಯ ಮತ್ತು ದೆಹಲಿ ಹೈಕೋರ್ಟ್‌ನ ಪ್ರತಿಕ್ರಿಯೆಯನ್ನು ಕೇಳಿತ್ತು.
"ಈ ವಿಷಯದಲ್ಲಿ ಆದೇಶಗಳನ್ನು ರವಾನಿಸುವ ಮೊದಲು, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳನ್ನು ಆಲಿಸುವುದು ಸೂಕ್ತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ದೇಶದ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್-ಜನರಲ್‌ಗಳು ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಆದೇಶಿಸಿತು.
ಪ್ರಕರಣ: ಅಖಿಲ ಭಾರತ ನ್ಯಾಯಾಧೀಶರ ಸಂಘ VS ಭಾರತ ಸರ್ಕಾರ